ಕರ್ನಾಟಕ

karnataka

ETV Bharat / state

ಹೆಲ್ಮೆಟ್​ ಹಾಕಿದ್ರೆ ಗುಲಾಬಿ, ಇಲ್ಲದಿದ್ರೆ ದಂಡದ ರಶೀದಿ; ಸಾವು ತಡೆಯಲು ಹಾವೇರಿ ಎಸ್​ಪಿ ಜಾಗೃತಿ - SP Anshukumar

ಹಾವೇರಿ ಜಿಲ್ಲೆಯಲ್ಲಿ ಅಪಘಾತದಿಂದ ದ್ವಿಚಕ್ರ ವಾಹನ ಸವಾರರ ಸಾವು ಸಂಭವಿಸುತ್ತಿವೆ. ಇದನ್ನು ತಡೆಗಟ್ಟಲು ಜಿಲ್ಲೆಯಲ್ಲಿ ಹೆಲ್ಮೆಟ್​ ಜಾಗೃತಿ ಅಭಿಯಾನ ಆರಂಭವಾಗಿದೆ.

Helmet awareness
ಹೆಲ್ಮೆಟ್​ ಜಾಗೃತಿ

By ETV Bharat Karnataka Team

Published : Dec 12, 2023, 11:21 AM IST

Updated : Dec 12, 2023, 1:58 PM IST

ಬೈಕ್​ ಅಪಘಾತದಿಂದ ಸಾವು ತಡೆಯಲು ಹೆಲ್ಮೆಟ್​ ಜಾಗೃತಿ

ಹಾವೇರಿ:ರಾಜ್ಯದಲ್ಲಿ ರಸ್ತೆ ಅಪಘಾತಗಳಲ್ಲಿ ಹೆಚ್ಚು ಸಾವು ಸಂಭವಿಸುತ್ತಿರುವ ಜಿಲ್ಲೆಗಳಲ್ಲಿ ಹಾವೇರಿಯೂ ಒಂದು. ಜಿಲ್ಲೆಯಲ್ಲಿ ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿರುವ ಸಂಖ್ಯೆ 200ಕ್ಕೂ ಅಧಿಕ ಇದೆ. ಅದರಲ್ಲೂ ಹೆಚ್ಚಿನ ಸಾವು ಬೈಕ್ ಸವಾರರದ್ದಾಗಿದೆ.

ಹೀಗಿದೆ ಅಂಕಿಅಂಶ: 2021ರಲ್ಲಿ ರಸ್ತೆ ಅಪಘಾತದಲ್ಲಿ 1,236 ಜನ ಗಾಯಗೊಂಡರೆ ಸಾವನ್ನಪ್ಪಿದವರ ಸಂಖ್ಯೆ 230 ಇತ್ತು. 2022ರಲ್ಲಿ 1385 ಜನ ರಸ್ತೆ ಅಪಘಾತಗಳಲ್ಲಿ ಗಾಯಗೊಂಡರೆ ಮೃತಪಟ್ಟವರ ಸಂಖ್ಯೆ 284. ಹಾಗೇ 2023 ರಲ್ಲಿ ಅಕ್ಟೋಬರ್​ರೆಗೆ 1,134 ಜನ ರಸ್ತೆ ಅಪಘಾತದಲ್ಲಿ
ಗಾಯಗೊಂಡಿದ್ದು, 228 ಜನರು ಸಾವನ್ನಪ್ಪಿದ್ದಾರೆ.

ಬಹುತೇಕ ಪ್ರಕರಣಗಳಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದು ಬೈಕ್​ ಸವಾರರು ಸಾವನ್ನಪ್ಪಿದ್ದಾರೆ. ಇವರಲ್ಲಿ ಹದಿಹರೆಯದವರೇ ಹೆಚ್ಚು ಅನ್ನೋದು ಕಳವಳ ಮೂಡಿಸಿದೆ. ರಸ್ತೆ ಅಪಘಾತದಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬಗಳು ಮಾತ್ರ ಕಣ್ಣೀರಲ್ಲಿ ಕೈತೊಳೆಯುತ್ತಿವೆ. ಇದನ್ನರಿತಿರುವ ಹಾವೇರಿ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಇದೀಗ ರಸ್ತೆ ಅಪಘಾತ ನಿಯಂತ್ರಿಸಲು ಮತ್ತು ಸಾವುಗಳನ್ನು ತಡೆಯಲು ಹೆಲ್ಮೆಟ್ ಜಾಗೃತಿ ಕಾರ್ಯಕ್ರಮ ಕೈಗೊಂಡಿದ್ದಾರೆ.

ಜಿಲ್ಲೆಯಲ್ಲಿ 60 ಜಾಗೃತಿ ಪಾಯಿಂಟ್​; ಇದಕ್ಕಾಗಿ ಜಿಲ್ಲೆಯಲ್ಲಿರುವ ಸುಮಾರು 19 ಪೊಲೀಸ್ ಠಾಣೆಗಳಲ್ಲಿ 60 ಪಾಯಿಂಟ್ ಮಾಡಿ ಹೆಲ್ಮೆಟ್ ಜಾಗೃತಿ ಮೂಡಿಸುತ್ತಿದ್ದಾರೆ. 60 ಪಾಯಿಂಟ್‌ಗಳಲ್ಲಿ ಮುಂಜಾನೆ 9 ರಿಂದ 11 ಗಂಟೆಯವರೆಗೆ ಮತ್ತು ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಸ್ವತಃ ರಸ್ತೆಗೆ ಇಳಿದಿರುವ ಎಸ್ಪಿ ಅಂಶುಕುಮಾರ್ ತಾವೇ ಹೆಲ್ಮೆಟ್​​ ಪರಿಶೀಲನೆ ನಡೆಸುತ್ತಿದ್ದು, ಮೊದಲು ನಮ್ಮ ಸಿಬ್ಬಂದಿ ಹೆಲ್ಮೆಟ್ ಹಾಕಬೇಕು. ಬೇರೆಯವರಿಗೆ ತಿಳಿ ಹೇಳುವ ಮುನ್ನ ನಾವು ಸರಿಯಾಗಿರಬೇಕು ಎಂದಿದ್ದಾರೆ.

ಜತೆಗೆ ಯಾರೇ ಇರಲಿ, ದ್ವಿಚಕ್ರವಾಹನ ಓಡಿಸುತ್ತಿದ್ದರೆ ಅವರ ತಲೆ ಮೇಲೆ ಹೆಲ್ಮೆಟ್ ಇರಲೇಬೇಕು. ಇಲ್ಲದಿದ್ದರೆ ದಂಡಹಾಕುವಂತೆ ಖಡಕ್ಕಾಗಿಯೇ ಸೂಚಿಸಿದ್ದಾರೆ. ಆರಂಭದಲ್ಲಿ ಕೆಲ ದಿನ ಹೆಲ್ಮೆಟ್ ಇಲ್ಲದೆ ಬರುತ್ತಿದ್ದ ಸವಾರರಿಗೆ ಎಚ್ಚರಿಕೆ ನೀಡಿ ಕಳಿಹಿಸುತ್ತಿದ್ದ ಪೊಲೀಸ್ ಇಲಾಖೆ ಸಿಬ್ಬಂದಿ ಇದೀಗ ಹೆಲ್ಮೆಟ್ ಇಲ್ಲದ ಸವಾರರಿಗೆ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ. ವಿಶೇಷವಾಗಿ ಹೆಲ್ಮೆಟ್ ಹಾಕಿಕೊಂಡು ಬರುವ ಬೈಕ್​ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಹಾಗೇ, ಹಾವೇರಿ ಜಿಲ್ಲೆ ರಾಣೆಬೆನ್ನೂರು ಪೊಲೀಸರು ಯಮ, ಚಿತ್ರಗುಪ್ತ ಮತ್ತು ಕಿಂಕರ ರೂಪಕದ ಮೂಲಕ ಬೈಕ್​ ಸವಾರರಿಗೆ ಹೆಲ್ಮೆಟ್ ಜಾಗೃತಿ ಮೂಡಿಸುತ್ತಿದ್ದಾರೆ. ರಸ್ತೆಯಲ್ಲಿ ನಿಲ್ಲುವ ಯಮರಾಯ ಹೆಲ್ಮೆಟ್ ಇಲ್ಲದ ಬೈಕ್ ಸವಾರರ ಕೊರಳಿಗೆ ನೇಣುಹಾಕಿ ಕರೆದೊಯ್ಯುವ ರೂಪಕದ
ಮೂಲಕ ಅರಿವು ಮೂಡಿಸುತ್ತಿದ್ದಾರೆ.

ಜಿಲ್ಲೆಯಲ್ಲಿ 110 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಬೈಕ್ ಅಪಘಾತಗಳಲ್ಲಿ ಈ ರಾಷ್ಟ್ರೀಯ ಹೆದ್ದಾರಿಯದ್ದೇ ಸಿಂಹ ಪಾಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲೈನ್ ಮೈಂಟೇನ್ ಮೇಲೆ ಸಹ ಕಣ್ಣಿಡಲಾಗಿದೆ. ಹೆಲ್ಮಟ್​ ಅಲ್ಲದೆ ಲೈಸೆನ್ಸ್ ಮತ್ತು ಇನ್ಶೂರೆನ್ಸ್​ ಸೇರಿದಂತೆ ವಿವಿಧ ಅಂಶಗಳ ಕಡೆ ಗಮನ ಹರಿಸಲಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್​ ಧರಿಸುವ ಮೂಲಕ ಎಸ್ಪಿ ಅಂಶುಕುಮಾರ್ ಅವರ ಜಾಗೃತಿಗೆ ಕೈಜೋಡಿಸಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ತಮ್ಮ ಕೆಲಸ ಖಾಯಂಗೊಳಿಸುವಂತೆ ಪೌರ ಕಾರ್ಮಿಕರ ಆಗ್ರಹ: ಶೃಂಗೇರಿಯಲ್ಲಿ ಮುಂದುವರಿದ ಪ್ರತಿಭಟನೆ

Last Updated : Dec 12, 2023, 1:58 PM IST

ABOUT THE AUTHOR

...view details