ರಾಣೆಬೆನ್ನೂರು:ನಗರದ ಗಂಗಾಪುರ ರಸ್ತೆ ಹಾಗೂ ಹೊನ್ನತ್ತಿ ರಸ್ತೆ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ.
ಗಂಗಾಪುರ ರಸ್ತೆಯ ಬೆಂಗಳೂರು - ಹುಬ್ಬಳ್ಳಿ ರೈಲ್ವೆ ಮಾರ್ಗ ಹಾಗೂ ಹೊನ್ನತ್ತಿ ಮಾರ್ಗದ ರೈಲ್ವೆ ಗೇಟ್ನಲ್ಲಿ ಕೇಳ ಸೇತುವೆ ನಿರ್ಮಿಸಲಾಗುತ್ತಿದೆ. ಈ ಮಾರ್ಗ ಬಂದ್ ಮಾಡಿರುವ ಹಿನ್ನೆಲೆ ಗಂಗಾಪುರ ರೈಲ್ವೆ ಗೇಟ್ ಒಳಗೆ ರಾಣೆಬೆನ್ನೂರು ನಗರಕ್ಕೆ ಬರಬೇಕು. ಇದರಿಂದ ನಿತ್ಯ ಕೂಡ ಸವಾರರು ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಗಿದೆ.
ಈ ರೈಲು ಗೇಟ್ ಮಾರ್ಗದಲ್ಲಿ 20 ಹಳ್ಳಿಗಳನ್ನು ಸಂಪರ್ಕಿಸುತ್ತದೆ. ಅಲ್ಲದೇ, ನೆರೆಯ ಜಿಲ್ಲೆ ಬಳ್ಳಾರಿಗೆ ಇದೇ ಮಾರ್ಗದ ಮೂಲಕ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇನ್ನೂ ರೈಲು ಸಂಚರಿಸುವ ಸಮಯದಲ್ಲಿ ಗೇಟ್ ಹಾಕಿದಾಗ ಒಂದು ಕಿ.ಮೀ. ದೂರದಷ್ಟು ವಾಹನಗಳು ಸಾಲಾಗಿ ನಿಲ್ಲಬೇಕಾಗುತ್ತದೆ.
ಸಂಚಾರ ಪೋಲಿಸರಿಗೆ ತಲೆ ನೋವು:ಗಂಗಾಪುರ ರೈಲು ಗೇಟ್ ಮಾರ್ಗದಲ್ಲಿ ವಾಹನ ಸಂಚಾರ ದಟ್ಟವಾದ ಹಿನ್ನೆಲೆಯಲ್ಲಿ ಆ ಸಮಸ್ಯೆ ಬಗೆಹರಿಸಲು ಇಬ್ಬರು ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೂ ಇಲ್ಲಿನ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಅಡ್ಡಾದಿಡ್ಡಿ ವಾಹನ ಚಲಾಯಿಸುವವರಿಗೆ ಕಡಿವಾಣ ಹಾಕಲು ಪೊಲೀಸರು ಎಷ್ಟೇ ಕ್ರಮ ಕೈಗೊಂಡರೆ, ಸವಾರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಾರೆ. ಆಗ ದಟ್ಟಣೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ.