ಹಾವೇರಿ: ಜಿಲ್ಲೆಯ ರೈತ ಮಳೆಯಿಂದ ಅಕ್ಷರಶಃ ಹೈರಾಣಾಗಿದ್ದಾನೆ. ರೈತ ಬೆಳೆದ ಸೋಯಾಬಿನ್, ಶೇಂಗಾ, ಮೆಕ್ಕೆಜೋಳ ಹಾಗೂ ಹತ್ತಿ ವರುಣನ ಆರ್ಭಟದಲ್ಲಿ ನೀರುಪಾಲಾಗಿವೆ. ಎಕರೆಗೆ ಸಹಸ್ರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆಗಳನ್ನ ಮಳೆರಾಯ ಹಾಳು ಮಾಡಿದ್ದಾನೆ. ಜಮೀನಿನಲ್ಲಿ ಕಿತ್ತು ಹಾಕಿದ್ದ ಶೇಂಗಾ ಗಿಡಗಳು ನೀರಿನಲ್ಲಿ ತೇಲಿ ಹೋಗಿವೆ. ಇನ್ನೇನು ಶೇಂಗಾ ಬೆಳೆ ಬಂತು ಎನ್ನುವಷ್ಟರಲ್ಲಿ ಮಳೆ ಬಂದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹತ್ತಿ ಬೆಳೆ ಹಾಳಾಗಿದ್ದು, ತಮ್ಮ ಗೋಳು ಕೇಳಲು ಅಧಿಕಾರಿಗಳು, ಜನಪ್ರತಿನಿಧಿಗಳು ಬರದಿರುವುದು ರೈತರಿಗೆ ಬೇಸರ ತರಿಸಿದೆ.
ಜಿಲ್ಲೆಯ ಪ್ರಮುಖ ಬೆಳೆಗಳೆಂದರೆ ಹತ್ತಿ, ಮೆಕ್ಕೆಜೋಳ, ಶೇಂಗಾ ಹಾಗೂ ಸೋಯಾಬಿನ್. ಈ ಬೆಳೆಗಳು ಬೆಳೆದು ನಿಂತಿದ್ದು, ಇನ್ನೇನು ರೈತರ ಕೈಗೆ ಫಸಲು ಬರಬೇಕಿತ್ತು. ಆದರೆ ರೈತನ ಈ ಆಸೆಗೆ ಮಳೆರಾಯ ತಣ್ಣೀರು ಎರಚಿದ್ದಾನೆ. ಮಳೆರಾಯನ ಆರ್ಭಟಕ್ಕೆ ಈ ಬೆಳೆಗಳು ನೀರುಪಾಲಾಗಿವೆ. ಬಹುತೇಕ ರೈತರು ಶೇಂಗಾ ಕಿತ್ತು ಜಮೀನಿನಲ್ಲಿ ಒಣಗಲು ಹಾಕಿದ್ದಾರೆ. ಇದೇ ಸಮಯದಲ್ಲಿ ಸುರಿದ ಮಳೆಯಿಂದ ಶೇಂಗಾ ಬೆಳೆ ಹಾಳಾಗಿದೆ. ಶೇಂಗಾ ನೀರಿನಲ್ಲಿ ತೋಯ್ದು ಅಲ್ಲಿಯೇ ಮೊಳಕೆ ಒಡೆಯಲಾರಂಭಿಸಿದೆ. ಇನ್ನು ರೈತರ ರಾಸುಗಳಿಗೆ ಮೇವಾಗಬೇಕಿದ್ದ ಶೇಂಗಾ ಸೊಪ್ಪು ನೀರಿನಲ್ಲಿ ತೇಲಿ ಹೋಗಿದೆ. ಇಷ್ಟು ದಿನ ಕಷ್ಟಪಟ್ಟು ಬೆಳೆದ ಶೇಂಗಾ ಇನ್ನೇನು ಕೈಗೆ ಬರುತ್ತಿತ್ತು. ಅಷ್ಟರಲ್ಲಿ ಮಳೆರಾಯ ಅಬ್ಬರಿಸಿದ್ದು, ಬೆಳೆ ನೀರುಪಾಲಾಗಿದೆ ಎನ್ನುತ್ತಿದ್ದಾರೆ ರೈತರು.