ಹಾವೇರಿ: ಜಿಲ್ಲಾದ್ಯಂತ ಮಳೆಯ ಆರ್ಭಟ(Heavy Rainfall in Haveri) ಮುಂದುವರೆದಿದೆ. ನಿರಂತರ ಮಳೆಯಿಂದ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬಿಸಲಹಳ್ಳಿ ಗ್ರಾಮದ ಈರಣ್ಣ ಜ್ಯೋತಿ ಎಂಬುವರ ಮನೆ ನೆಲಕ್ಕುರುಳಿದೆ.
ರಾಣೆಬೆನ್ನೂರು ತಾಲೂಕಿನ ನದಿಹರಳಹಳ್ಳಿ ಗ್ರಾಮದ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಮನೆಯಲ್ಲಿನ ವಸ್ತುಗಳೆಲ್ಲ ನೀರಲ್ಲಿ ನಿಂತು ಹಾಳಾಗಿವೆ. ರಾಣೆಬೆನ್ನೂರು ನಗರದ ದೊಡ್ಡಕೆರೆ ಕೋಡಿ ಬಿದ್ದಿದ್ದು, ಪರಿಣಾಮ ರಾಣೆಬೆನ್ನೂರು ನಗರ ಹಾಗು ಅಡವಿ ಆಂಜನೇಯ ಬಡಾವಣೆ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ.
ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಸಂಪರ್ಕ ಬಂದ್ ಆಗಿದೆ. ರಾಣೆಬೆನ್ನೂರು ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿನ ಜಮೀನುಗಳಿಗೆ ಹಳ್ಳದ ನೀರು ನುಗ್ಗಿದ್ದು, ಇದರಿಂದ ಕಟಾವು ಮಾಡಿ ರಾಶಿ ಹಾಕಿದ್ದ ಮೆಕ್ಕೆಜೋಳ ಉಳಿಸಿಕೊಳ್ಳಲು ರೈತರ ಹರಸಾಹಸ ಪಡುತ್ತಿದ್ದಾರೆ.
ಜಿಲ್ಲೆಯ ತುಂಗಭದ್ರಾ, ವರದಾ, ಕುಮದ್ವತಿ ಮತ್ತು ಧರ್ಮಸ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ. ಹಳ್ಳ ಕೊಳ್ಳ ಅಪಾಯಮಟ್ಟ ಮೀರಿ ಹರಿಯತ್ತಿದ್ದು, ಇದರಿಂದಾಗಿ ಕೆಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತಗೊಂಡಿವೆ. ನದಿಹರಳಹಳ್ಳಿಯಲ್ಲಿ ಜಮೀನುಗಳಿಗೆ ನೀರು ನುಗ್ಗಿದ್ದು, ಹಾನಗಲ್ ತಾಲೂಕು ಮಲಗುಂದ ಗ್ರಾಮದಲ್ಲಿ ಮನೆ ಧರೆಗುರುಳಿದೆ ಎಂದು ತಿಳಿದು ಬಂದಿದೆ.