ಹಾವೇರಿ:ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದ ಜಮೀನಿಗೆ ಮಳೆ ನೀರು ನುಗ್ಗಿದೆ. ಜಿಲ್ಲೆಯಲ್ಲಿ 25ಕ್ಕೂ ಅಧಿಕ ಮನೆಗಳು ಧರೆಗುರುಳಿವೆ. ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ವರದಾ, ತುಂಗಾಭದ್ರಾ, ಧರ್ಮಾ ಮತ್ತು ಕುಮದ್ವತಿ ನದಿಗಳು ಮೈದುಂಬಲಾರಂಭಿಸಿವೆ. ಮಳೆಯ ಜೊತೆ ಗಾಳಿ ಬೀಸಿದ್ದರಿಂದ ನೂರಾರು ಎಕರೆಯಲ್ಲಿ ಬೆಳೆದಿದ್ದ ವಿಳ್ಯೆದೆಲೆ ಬಳ್ಳಿಗಳು ನೆಲಕಚ್ಚಿವೆ.
ಹಾವೇರಿ ಜಿಲ್ಲೆ ಸವಣೂರು - ಹಾವೇರಿ ತಾಲೂಕುಗಳ ನೂರಾರು ಎಕರೆಯಲ್ಲಿ ಬೆಳೆದಿದ್ದ ವಿಳ್ಯೆದೆಲೆ ಬಳ್ಳಿಗಳು ನೀರಿಗಾಹುತಿಯಾಗಿವೆ. ಕೂಳೂರು ಗ್ರಾಮದ ಮಾರುತಿ ಬಂಕಾಪುರ ಬೆಳೆದಿದ್ದ ವಿಳ್ಯೆದೆಲೆ ನೀರಿನಲ್ಲಿ ಮಕಾಡೆ ಮಲಗಿದೆ. ಕಳೆದ ಎರಡು ವರ್ಷಗಳಿಂದ ಬೆಳೆದಿದ್ದ ವಿಳ್ಯೆದೆಲೆ ಇದೀಗ ಫಸಲು ಬಿಡಲಾರಂಭಿಸಿತ್ತು. ಇನ್ನೇನು ಕೊಯ್ಯಬೇಕು ಅನ್ನುವಷ್ಟರಲ್ಲಿ ಮಳೆ ಬಂದು ಎಲ್ಲ ನೀರಿನಲ್ಲಿ ಹೋಮ ಮಾಡಿದಂತಾಯಿತು ಎಂದು ಮಾರುತಿ ಬೇಸರ ವ್ಯಕ್ತಪಡಿಸಿದರು.