ಹಾವೇರಿಯಲ್ಲಿ ಜಿಲ್ಲಾದ್ಯಂತ ಭಾರಿ ಮಳೆ: ಮೈದುಂಬಿ ಹರಿಯುತ್ತಿರುವ ನದಿಗಳು ಹಾವೇರಿ:ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಭಾರಿ ಮಳೆಯಿಂದ ಜಿಲ್ಲೆಯ ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಹರಿಯುವ ವರದಾ, ಧರ್ಮಾ, ಕುಮದ್ವತಿ ಮತ್ತು ತುಂಗಾಭದ್ರಾ ನದಿಗಳ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದರಿಂದ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ.
ಎರಡು ಗ್ರಾಮಗಳ ಸಂಪರ್ಕ ಸೇತುವೆ ಬಂದ್:ವರದಾ ನದಿ, ತುಂಗಭದ್ರಾ ನದಿ ಅಪಾಯದಮಟ್ಟ ಮೀರಿ ಹರಿಯುತ್ತೀವೆ. ಈ ಮಧ್ಯೆ ವರದಾ ನದಿಯಲ್ಲಿ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದ್ದು, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಾಳಂಬೀಡ ಲಕಮಾಪುರ ಮಧ್ಯದ ಬಾಂದಾರ ಕಮ್ ಸೇತುವೆ ಮುಳುಗಡೆಯಾಗಿದೆ. ಎರಡು ಗ್ರಾಮಗಳ ನಡುವಿನ ಸಂಪರ್ಕ ಸೇತುವೆ ಬಂದ್ ಆಗಿದ್ದು, ಬೇರೆ ಮಾರ್ಗಗಳ ಮೂಲಕ ಗ್ರಾಮಸ್ಥರು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೆಕ್ಕೆಜೋಳ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ಜಲಾವೃತ:ಇನ್ನೂ ಹಾವೇರಿ ಜಿಲ್ಲಾಡಳಿತ ಭವನ ಮತ್ತು ಸವಣೂರು ಸಂಪರ್ಕಿಸುವ ಕಳಸೂರು ಮತ್ತು ಹಾವೇರಿ ಮಧ್ಯದ ಸೇತುವೆ ಕಮ್ ಬ್ಯಾರೇಜ್ ಮುಳುಗಡೆಯಾಗಿದೆ. ಹಾವೇರಿ ತಾಲೂಕಿನ ನಾಗನೂರು ಮತ್ತು ಹಾನಗಲ್ ತಾಲೂಕಿನ ಕೂಡಲ ಗ್ರಾಮದ ನಡುವಿನ ಬ್ಯಾರೇಜ್ ಕಮ್ ಸೇತುವೆ ಮುಳುಗಡೆಯಾಗಿವೆ. ಈ ಮಧ್ಯೆ ನದಿಗಳು ಪ್ರವಾಹದ ಸ್ಥಿತಿ ಉಂಟಾಗುತ್ತಿದ್ದ ಸಾವಿರಾರು ಎಕರೆಯಲ್ಲಿ ಬೆಳೆದ ಗೋವಿನಜೋಳ ,ಭತ್ತ, ಕಬ್ಬು ಮೆಕ್ಕೆಜೋಳ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ಜಲಾವೃತವಾಗಿವೆ.
ಗಂಗಾಮಾತೆ ಪೂಜೆ ಸಲ್ಲಿಸಿದ ಮಹಿಳೆಯರು:ನೂರಾರು ಎಕರೆಯಲ್ಲಿ ಬೆಳೆದಿದ್ದ ಅಡಿಕೆ ಗಿಡಗಳು ನೀರಿನಲ್ಲಿ ನಿಂತಿವೆ. ಜಿಲ್ಲೆಯ ಇನ್ನೂ ಕೆಲವು ಸೇತುವೆ ಕಮ್ ಬ್ಯಾರೇಜ್‌ಗಳು ಮುಳುಗುವ ಭೀತಿಯಲ್ಲಿವೆ. ಈ ಮಧ್ಯೆ ಜಿಲ್ಲೆ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಮೈದುಂಬಿರುವ ವರದಾ ನದಿಗೆ ಗ್ರಾಮದ ಮಹಿಳೆಯರು ಪೂಜೆ ಸಲ್ಲಿಸಿದರು. ಸ್ಥಳೀಯ ಮಣ್ಣು ತೆಗೆದುಕೊಂಡು ನದಿಯ ತಟದಲ್ಲಿ ಐದು ಮೂರ್ತಿಗಳನ್ನು ಮಾಡಿ ಉಡಿಯಕ್ಕಿ ತುಂಬಿ ಪೂಜೆ ಸಲ್ಲಿಸಿದರು. ಕರ್ಪೂರ ಬೆಳಗಿ ನದಿಯಲ್ಲಿ ತೇಲಿಬಿಟ್ಟರು. ಮಹಿಳೆ ಈ ನದಿ ಮೈದುಂಬಿಕೊಂಡಿರುವುದನ್ನು ಕಂಡು ಪೂಜೆ ನೆವೇರಿಸಿದರು. ನದಿ ಈ ರೀತಿ ತುಂಬಿ ಬಂದಿರುವುದು ಸಂತಸ ತಂದಿದೆ. ಇಷ್ಟು ಕೃಪೆ ಸಾಕು, ಇನ್ನೂ ಗಂಗಾಮಾತೆ ರೈತರ ಜಮೀನುಗಳನ್ನು ಹಾಳು ಮಾಡಬಾರದು ಎಂದು ಮಹಿಳೆಯರು ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ:ರಾಜ್ಯದಲ್ಲಿ ಈವರೆಗೆ ಮಳೆಗೆ 38 ಮಂದಿ ಸಾವು, ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ: ಸಿಎಂ ಸಿದ್ದರಾಮಯ್ಯ ಘೋಷಣೆ