ಹಾವೇರಿ: ಚೀನಾದಲ್ಲಿ ಉಂಟಾದ ಕೊರೊನಾ ವೈರಸ್ ಇದೀಗ ಭಾರತಕ್ಕೂ ಹಬ್ಬಿದ್ದು, ರಾಜ್ಯದೆಲ್ಲೆಡೆ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಹಾವೇರಿ ಜಿಲ್ಲಾಡಳಿತ ಮಾತ್ರ ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಕೊರೊನಾ ಬಗ್ಗೆ ಜಾಗೃತಿ ಮೂಡಿಸುವತ್ತ ಚಿತ್ತ ಹರಿಸದ ಹಾವೇರಿ ಜಿಲ್ಲಾಡಳಿತ - ಕೊರೊನಾ ವೈರಸ್
ಕೊರೊನಾ ವೈರಸ್ ಭಾರತಕ್ಕೆ ಕಾಲಿಟ್ಟಿರುವ ಬಗ್ಗೆ ಎಲ್ಲರೂ ಭಯಭೀತರಾಗಿದ್ದು, ಸರ್ಕಾರದ ವತಿಯಿಂದ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಹಾವೇರಿ ಜಿಲ್ಲಾಡಳಿತ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಕೊರೊನಾ ವೈರಸ್ ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ಒಂದು ವಾರ್ಡ್ ತೆರೆದಿದ್ದು ಬಿಟ್ಟರೆ, ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ ಅಥವಾ ರೈಲು ನಿಲ್ದಾಣಗಳಲ್ಲಿ ಈ ಬಗ್ಗೆ ಯಾವುದೇ ಭಿತ್ತಿ ಪತ್ರಗಳು ಸಹ ಗೋಚರಿಸುತ್ತಿಲ್ಲ.
ಈ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪರ ಊರಿನಿಂದ ಹಾವೇರಿ ಜಿಲ್ಲಾ ಕೇಂದ್ರಕ್ಕೆ ಬರುವ ಹಳ್ಳಿಗರಿಗೆ ಕೊರೊನಾ ವೈರಸ್ ಬಗ್ಗೆ ತಿಳಿದಿರುವುದಿಲ್ಲ, ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವತ್ತ ಜಿಲ್ಲಾಡಳಿತ ಹೆಜ್ಜೆ ಹಾಕಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.