ಹಾವೇರಿ: ಅಣ್ಣನ ಪತ್ನಿ ಮತ್ತು ಅವರ ಇಬ್ಬರು ಮಕ್ಕಳನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಮೈದುನನ್ನು ಬಂಧಿಸುವಲ್ಲಿ ಹಾವೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಮಾರಗೌಡ ಮರಿಗೌಡರ್ ಬಂಧಿತ ಆರೋಪಿ.
ಆರೋಪಿ ಇದೇ 4ರಂದು ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಅತ್ತಿಗೆ ಗೀತಾ (32), ಅವರ ಮಕ್ಕಳಾದ ಅಕುಲ್ (10) ಮತ್ತು 7 ವರ್ಷದ ಅಂಕಿತಾಳನ್ನು ಕೊಲೆ ಮಾಡಿ ಕುಮಾರಗೌಡ ಪರಾರಿಯಾಗಿದ್ದ. ಮಚ್ಚಿನ ದಾಳಿಯಿಂದ ಅಕುಲ್ ಸ್ಥಳದಲ್ಲಿ ಸಾವನ್ನಪ್ಪಿದ್ದರೆ, ಗೀತಾ ಮತ್ತು ಅಂಕಿತಾ ಚಿಕಿತ್ಸೆ ಫಲಿಸದೆ ಹಾನಗಲ್ ತಾಲೂಕಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಕೊಲೆಗೆ ಕಾರಣ:ಅಣ್ಣ ಹೊನ್ನೇಗೌಡ ಕಳೆದ 15 ವರ್ಷದಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ. ತಾನು ದುಡಿದ ಕಾಸಿನಲ್ಲಿ ಹಾನಗಲ್ ಪಟ್ಟಣದ ವಿವಿಧೆಡೆ ಆಸ್ತಿಪಾಸ್ತಿ ಮಾಡಿದ್ದಾನೆ. ಹಾನಗಲ್ನಲ್ಲಿ ಅಣ್ಣ ಹೊನ್ನೇಗೌಡರ ವ್ಯವಹಾರವನ್ನು ಸಹೋದರ ಕುಮಾರ ನೋಡಿಕೊಳ್ಳುತ್ತಿದ್ದ. ಆದರೆ ಕೆಲ ದಿನಗಳ ಹಿಂದೆ ಭಾರತಕ್ಕೆ ಆಗಮಿಸಿದ್ದ ಅಣ್ಣ ಹೊನ್ನೇಗೌಡ ಇನ್ಮುಂದೆ ವ್ಯವಹಾರವನ್ನು ತನ್ನ ಪತ್ನಿ ಗೀತಾ ಹೆಸರಲ್ಲಿ ನಡೆಸುವಂತೆ ತಮ್ಮನಿಗೆ ತಿಳಿಸಿದ್ದರು. ವಹಿವಾಟು ತಮ್ಮನ ಬದಲು ಪತ್ನಿಯೇ ಹೆಸರಲ್ಲಿ ನಡೆಸು ಎಂದು ಹೇಳಿದ್ದಕ್ಕೆ ಕುಮಾರಗೌಡ ಕೋಪಗೊಂಡಿದ್ದ.
ನವೆಂಬರ್ 2ರಂದು ಅಣ್ಣನ ಹೆಂಡತಿ ಗೀತಾ ಮತ್ತು ಅವರ ಮಕ್ಕಳಾದ ಅಕುಲ್ ಮತ್ತು ಅಂಕಿತಾಳನ್ನು ಮಾರಕಾಸ್ತ್ರಗಳಿಂದ ಕೊಲೆಗೈದು ಪರಾರಿಯಾಗಿದ್ದ. ಸ್ಥಳಕ್ಕೆ ಭೇಟಿ ನೀಡಿದ್ದ ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ ಆರೋಪಿ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಗುರುವಾರ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.