ಕರ್ನಾಟಕ

karnataka

ETV Bharat / state

ಇಂಡಿಯನ್ ಬುಕ್ ಆಫ್ ರೆಕಾರ್ಡ್​​ನಲ್ಲಿ ಹಾವೇರಿಯ ನಮ್ರತಾ ಹೆಸರು: ಬೆರಗಾಗಿಸುತ್ತೆ ಈಕೆಯ ಟ್ಯಾಲೆಂಟ್​! - haveri student Namrutha news

ಹಾವೇರಿಯ ಬಾಲಕಿ ನಮ್ರತಾ ಸಾಮಾನ್ಯ ಜ್ಞಾನ, ಗಣಿತ ಮತ್ತು ಸಾಕಷ್ಟು ವಿಷಯಗಳಲ್ಲಿ ಅಪಾರ ಜ್ಞಾನ ಹೊಂದುವ ಮೂಲಕ ಗಮನ ಸೆಳೆದಿದ್ದಾಳೆ. ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಹೆಸರು ಸೇರ್ಪಡೆಯಾಗಲು ಈ ಬಾಲೆ ಸಾಕಷ್ಟು ವಿಷಯಗಳಲ್ಲಿ ಪ್ರಾವೀಣ್ಯತೆ ಗಳಿಸಿದ್ದಾಳೆ.

haveri student Namrutha name in Indian book of record
ಇಂಡಿಯನ್ ಬುಕ್ ಆಫ್ ರೆಕಾರ್ಡ್‌ ದಾಖಲೆ

By

Published : Jul 3, 2021, 7:23 AM IST

Updated : Jul 3, 2021, 2:26 PM IST

ಹಾವೇರಿ:ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಗುಂಡಗಟ್ಟಿ ಗ್ರಾಮದ ನಮ್ರತಾಗೆ ಈಗ 8 ವರ್ಷ ವಯಸ್ಸು. ಈಗಾಗಲೇ ಈ ಬಾಲೆಯ ಹೆಸರು ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದೆ. ಕುಮಾರ ಮತ್ತು ಪೂರ್ಣಿಮಾ ಗುಡದಳ್ಳಿ ದಂಪತಿಯ ಮಗಳಾದ ಈ ಬಾಲಕಿಯ ಸಾಮಾನ್ಯ ಜ್ಞಾನ ಎಲ್ಲರನ್ನೂ ನಿಬ್ಬೆರಗಾಗಿಸುವಂತಿದೆ.

ಇಂಡಿಯನ್ ಬುಕ್ ಆಫ್ ರೆಕಾರ್ಡ್‌ ದಾಖಲೆ

ಹಾನಗಲ್ ತಾಲೂಕು ಅಕ್ಕಿಆಲೂರು ಗ್ರಾಮದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಮ್ರತಾ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆಯ ಸಾಮಾನ್ಯಜ್ಞಾನ, ಗಣಿತ ಮತ್ತು ಸಾಕಷ್ಟು ವಿಷಯಗಳಲ್ಲಿ ಅಪಾರ ಜ್ಞಾನ ಸಂಪಾದಿಸಿದ್ದಾಳೆ. ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಹೆಸರು ಸೇರ್ಪಡೆಯಾಗಲು ಈ ಬಾಲೆ ಸಾಕಷ್ಟು ವಿಷಯಗಳಲ್ಲಿ ಪ್ರಾವಿಣ್ಯತೆ ಗಳಿಸಿದ್ದಾಳೆ. 28 ರಾಜ್ಯಗಳು ಮತ್ತು ಅವುಗಳ ರಾಜಧಾನಿಗಳ ಹೆಸರುಗಳನ್ನು ಫಟಾಫಟ್ ಹೇಳುತ್ತಾಳೆ. 9 ಕೇಂದ್ರಾಡಳಿತ ಪ್ರದೇಶಗಳ ಹೆಸರು, ಭಾರತದ ರಾಷ್ಟ್ರಪತಿಗಳ ಹೆಸರು, ಪ್ರಧಾನಮಂತ್ರಿಗಳ ಹೆಸರುಗಳನ್ನೂ ನಮ್ರತಾ ಸಲೀಸಾಗಿ ಹೇಳುತ್ತಾಳೆ. ರಾಜ್ಯದ ಮುಖ್ಯಮಂತ್ರಿಗಳ ಹೆಸರುಗಳು, ಜಿಲ್ಲೆಗಳು, ಮಹಾನಗರ ಪಾಲಿಕೆಗಳ ಹೆಸರುಗಳು ನಮ್ರತಾ ನಾಲಿಗೆ ಮೇಲೆ ಸುಳಿದಾಡುತ್ತವೆ.

ವಿಶ್ವದಲ್ಲಿನ ಖಂಡಗಳ ಹೆಸರು, ಸೌರವ್ಯೂಹದ ಗ್ರಹಗಳ ಹೆಸರು, ಮಹಾಸಾಗರಗಳ ಹೆಸರುಗಳನ್ನು ಈ ಬಾಲಕಿ ಲೀಲಾಜಾಲವಾಗಿ ಹೇಳುತ್ತಾಳೆ. ಅಷ್ಟೇ ಯಾಕೆ ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಗಾದೆಮಾತುಗಳು, ರಾಜ್ಯವನ್ನಾಳಿದ ರಾಜಮನೆತನಗಳ ಹೆಸರುಗಳನ್ನ ನೀರು ಕುಡಿದಷ್ಟೇ ಸಲೀಸಾಗಿ ಹೇಳುತ್ತಾಳೆ. ನದಿಗಳ ಹೆಸರುಗಳು, ಸಾಮಾನ್ಯ ಜ್ಞಾನದ 100 ಪ್ರಶ್ನೆಗಳಿಗೆ ಇವಳಲ್ಲಿ ಉತ್ತರ ಸಿದ್ಧವಾಗಿಯೇ ಇರುತ್ತೆ.

ಸಾಮಾನ್ಯ ಜ್ಞಾನ ಅಷ್ಟೇ ಅಲ್ಲದೆ ಗಣಿತದಲ್ಲಿ ಸಹ ನಮ್ರತಾ ಮುಂದಿದ್ದಾಳೆ. 1 ರಿಂದ ನೂರರವರಗಿನ ಸಮ ಮತ್ತು ಬೆಸ ಸಂಖ್ಯೆಗಳು, ಬ್ಯಾಕ್​ವರ್ಡ್ ನಂಬರ್, 20 ರವರೆಗಿನ ಮಗ್ಗಿಗಳು, ಚಿಹ್ನೆಗಳನ್ನ ತಪ್ಪದಂತೆ ಹೇಳುವ ನಮ್ರತಾ ಬುದ್ಧಿಮತ್ತೆಯನ್ನು ನೋಡಿ ಇಂಡಿಯನ್ ಬುಕ್ ಆಫ್ ರೆಕಾರ್ಡ್​​​​ನವರು ಇವಳ ಹೆಸರನ್ನ ಅದಕ್ಕೆ ಸೇರ್ಪಡೆ ಮಾಡಿದ್ದಾರೆ.

ತಮ್ಮ ಗ್ರಾಮದ ಬಾಲೆಯ ಹೆಸರು ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಸೇರಿರುವುದಕ್ಕೆ ಗ್ರಾಮಸ್ಥರು ಹೆಮ್ಮೆ ವ್ಯಕ್ತಪಡಿಸುತ್ತಾರೆ. ತಂದೆ ಕುಮಾರ್ ಹಾಗೂ ತಾಯಿ ಪೂರ್ಣಿಮಾ ಮಾರ್ಗದರ್ಶನದಲ್ಲಿ ಪ್ರತಿಭಾವಂತಳಾಗಿರುವ ನಮ್ರತಾ ಜಿಲ್ಲಾಧಿಕಾರಿಯಾಗುವ ಗುರಿ ಇಟ್ಟುಕೊಂಡಿದ್ದಾಳೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಎಳೆ ವಯಸ್ಸಿನಲ್ಲೇ ಬಾಲಕಿ ನಮ್ರತಾ ವಿಶಿಷ್ಟ ಬುದ್ಧಿಶಕ್ತಿ ಹೊಂದಿರುವುದು ನಮ್ಮ ನಾಡು ಮತ್ತು ದೇಶಕ್ಕೆ ಹೆಮ್ಮೆಯ ವಿಷಯ. ಈಕೆಯ ಭವಿಷ್ಯ ಮತ್ತಷ್ಟು ಉಜ್ವಲಿಸಲಿ ಎಂದು ಹಾರೈಸೋಣ..

Last Updated : Jul 3, 2021, 2:26 PM IST

ABOUT THE AUTHOR

...view details