ಹಾವೇರಿ:"ನನ್ನ ಸಹೋದರಿಗೆ ಅನ್ಯಾಯವಾಗಿದೆ. ಆಕೆಯನ್ನು ಯಾರೂ ಭೇಟಿ ಆಗಲಿಲ್ಲ, ಸಾಂತ್ವನ ಹೇಳಲಿಲ್ಲ" ಎಂದು ಹಾನಗಲ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಬೇಸರ ತೋಡಿಕೊಂಡರು. ಸಿಎಂ ಸಿದ್ದರಾಮಯ್ಯ ಅವರನ್ನು ಹಾವೇರಿ ತಾಲೂಕಿನ ನರಸೀಪುರಕ್ಕೆ ಆಗಮಿಸಿ ಭೇಟಿ ಮಾಡುವ ಮುನ್ನ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
"ನಮಗೆ ಪರಿಹಾರ ನೀಡಬೇಕು. ಇದರ ಜೊತೆಗೆ ಸರ್ಕಾರಿ ಕೆಲಸ ನೀಡಬೇಕು. ಸಂತ್ರಸ್ತೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆಕೆಗೆ ಚಿಕಿತ್ಸೆ ನೀಡಬೇಕು" ಎಂದು ಆಗ್ರಹಿಸಿದರು. ಪೊಲೀಸರು ಭಾನುವಾರ ಮುಂಜಾನೆ ಏಕಾಏಕಿ ಸಂತ್ರಸ್ತೆಯನ್ನು ಮನೆಗೆ ಕರೆದುಕೊಂಡು ಬಂದು ಬಿಟ್ಟು ಹೋಗಿದ್ಧಾರೆ. ಈ ಕುರಿತಂತೆ ಪೊಲೀಸರು ಏನೂ ಹೇಳಲಿಲ್ಲ ಎಂದರು.
ಸಂತ್ರಸ್ತೆಯ ಸಹೋದರಿಯರು ಹಾಗೂ ಸಹೋದರರು ಹಾವೇರಿ ತಾಲೂಕಿನ ನರಸೀಪುರ ಬಳಿಯ ಹೆಲಿಪ್ಯಾಡ್ ಬಳಿ ಸಿಎಂ ಭೇಟಿಗಾಗಿ ಕಾಯುತ್ತಿದ್ದಾರೆ.
ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ಬಿ.ಸಿ.ಪಾಟೀಲ್ ಹೇಳಿಕೆ:ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, "ಸಿಎಂ ಸೋಮವಾರ ಹಾವೇರಿಗೆ ಬರುತ್ತಾರೆ ಎಂದು ಆಕೆಯನ್ನು ಶಿರಸಿಗೆ ಶಿಫ್ಟ್ ಮಾಡಿದ್ದಾರೆ. ಸರಕಾರ ತಲೆ ತಗ್ಗಿಸಬೇಕು. ಆಕೆಯನ್ನು ಭೇಟಿಯಾಗಿ ರಕ್ಷಣೆ ನೀಡಬೇಕಿತ್ತು. ಆರೋಪಿಗಳ ಪರವಾಗಿ ಈ ಸರಕಾರ ನಿಂತಿದೆ" ಎಂದು ಆರೋಪಿಸಿದರು.
"ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ನಾಯಕರು ನಿನ್ನೆ ಹಾವೇರಿಗೆ ಬಂದು ಸಂತ್ರಸ್ತೆ ಭೇಟಿಯಾಗುವವರಿದ್ದರು. ಇದು ಗೊತ್ತಾಗಿ ಏಕಾಏಕಿ ಸಂತ್ರಸ್ತೆಯನ್ನು ಶಿಫ್ಟ್ ಮಾಡಿದ್ದಾರೆ. ಸಿಎಂ ಬಂದು ಸಾಂತ್ವನ ಹೇಳಿದ್ದರೆ ಸಂತ್ರಸ್ತೆಯ ಬಗ್ಗೆ ಕನಿಕರ ಇದೆ ಎಂದುಕೊಳ್ಳಬಹುದಿತ್ತು. ಸರ್ಕಾರಕ್ಕೆ ಸಂತ್ರಸ್ತೆಗೆ ನ್ಯಾಯ ಕೊಡಿಸುವ ಇಚ್ಛೆಯಿಲ್ಲ ಅಂತಾ ಇದರ ಅರ್ಥವೇ ಎಂದು ಪಾಟೀಲ್ ಪ್ರಶ್ನಿಸಿದರು.
ಇದನ್ನೂ ಓದಿ:ಹಾವೇರಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮತ್ತಿಬ್ಬರ ಬಂಧನ: ಎಸ್‌ಪಿ