ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರ ಹೇಳಿಕೆ ಹಾವೇರಿ: "ಹಾನಗಲ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ತನಿಖೆ ಸರಿಯಾದ ದಾರಿಯಲ್ಲಿ ಸಾಗಬೇಕು. ಸಂತ್ರಸ್ತೆಗೆ ನ್ಯಾಯ ಸಿಗಬೇಕು. ಇಂಥ ಘಟನೆಗಳು ಸಮಾಜದಲ್ಲಿ ನಡೆಯಬಾರದು. ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಆಗಬೇಕು" ಎಂದು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಮಾತನಾಡಿದ ಅವರು, "ಹಾನಗಲ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿರುವುದರ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೇನೆ. ವಿಚಾರ ತಿಳಿದ ಬಳಿಕ ಎಎಸ್ಪಿ, ಡಿವೈಎಸ್ಪಿ, ಇನ್ಸ್‌ಪೆಕ್ಟರ್ ಜೊತೆ ಮಾತನಾಡಿದೆ. ಈಗ ನಾನು ಆಯೋಗದ ಅಧ್ಯಕ್ಷನಾಗಿ ಇಲ್ಲಿಗೆ ಬಂದಿದ್ದೇನೆ" ಎಂದರು.
"ಮೂಗನ ಭಾಷೆ ಮೂಗನ ತಾಯಿಗೆ ಮಾತ್ರ ಗೊತ್ತಾಗುತ್ತೆ. ನನಗೆ ತನಿಖೆ, ಕಾನೂನು ಬಗ್ಗೆ ತಿಳಿದಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ಸಂತ್ರಸ್ತೆ ಶಿರಸಿಯಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ 7 ವರ್ಷದ ಮಗಳಿದ್ಧಾಳೆ. ಜನವರಿ 8ಕ್ಕೆ ಹಾನಗಲ್ಗೆ ಬಂದಿದ್ದ ಸಂತ್ರಸ್ತೆ ರೂಂ ಒಂದರಲ್ಲಿ ಪರಿಚಯಸ್ಥರೊಂದಿಗೆ ಮಾತನಾಡುತ್ತಿದ್ದರು. ಆಗ ಕೆಲವರು ರೂಂ ಬಾಗಿಲು ಬಡಿದಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆ ದುಷ್ಕರ್ಮಿಗಳ ತಂಡ ಒಳನುಗ್ಗಿದೆ. ಬಳಿಕ ಇವರ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಸಂತ್ರಸ್ತೆಯನ್ನು ಕಾಡಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ" ಎಂದು ಪೊಲೀಸರು ತಿಳಿಸಿರುವುದಾಗಿ ಅವರು ಹೇಳಿದರು.
"ಸಂತ್ರಸ್ತೆ ಆಘಾತದಲ್ಲಿದ್ದಾರೆ. ಅಲ್ಪಸಂಖ್ಯಾತರೆಂದರೆ ಮುಸಲ್ಮಾನರು ಮಾತ್ರ ಅಲ್ಲ ಕ್ರೈಸ್ತರು, ಜೈನರು, ಬುದ್ದರು, ಪಾರ್ಸಿಗಳು ಸೇರಿದಂತೆ ಇನ್ನಿತರ ಸಮುದಾಯ ಸಮೂಹವೇ ಅಲ್ಪಸಂಖ್ಯಾತರು. ಅಲ್ಪಸಂಖ್ಯಾತ ಸಮುದಾಯಗಳಿಗೆ ಸಿಗಬೇಕಾದ ಹಕ್ಕುಗಳಿಗೆ ಧಕ್ಕೆಯಾದಾಗ ಅವರ ರಕ್ಷಣೆಗೆ ಹೋಗುವುದು ಅಲ್ಪಸಂಖ್ಯಾತ ಆಯೋಗದ ಕರ್ತವ್ಯ. ಪೊಲೀಸರ ವರದಿ ಪ್ರಕಾರ, ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಒಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೊಬ್ಬನನ್ನು ಬಂಧಿಸಬೇಕಿದೆ" ಎಂದರು.
ಸಿಆರ್‌ಪಿಸಿ 164ರ ಪ್ರಕಾರ, ಮ್ಯಾಜಿಸ್ಟ್ರೇಟ್ ಮುಂದೆ ಸ್ಟೇಟ್‌ಮೆಂಟ್ ಮಾಡಿಸಿದ್ದಾರೆ. 307, 376D ವಿಧಿಯಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಬಹಳ ಆಳವಾದ ತನಿಖೆ ಆಗಬೇಕಿದೆ. ಆರೋಪಿಗಳ ಹಿನ್ನೆಲೆ, ಬೇರೆ ಸಂಘಟನೆಗಳ ಜೊತೆ ಸಂಪರ್ಕದಲ್ಲಿದ್ದಾರಾ? ಹೀಗೆ ಎಲ್ಲದರ ಬಗ್ಗೆಯೂ ತನಿಖೆ ಆಗಬೇಕು. ಈ ಬಗ್ಗೆ ವಿಶೇಷ ತನಿಖಾ ತಂಡ ರಚನೆ ಆಗಬೇಕು. ಎಸ್ಪಿಯವರ ನೇರ ಮುಂದಾಳತ್ವದಲ್ಲಿ ತನಿಖೆ ನಡೆಯಬೇಕು. ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಲಿ. ಆರೋಪಿಗಳಿಗೆ ಜೀವಾವಧಿ ಅಥವಾ ಮರಣದಂಡನೆ ಆಗಬೇಕು" ಎಂದು ಒತ್ತಾಯಿಸಿದರು.
"ಏಳು ಜನ ಅತ್ಯಾಚಾರ ಮಾಡ್ತಾರೆ ಅಂದರೆ ಇದು ಘೋರ ಕೃತ್ಯ. ಇದು ರೇರೆಸ್ಟ್ ಆಫ್ ದಿ ರೇರ್ ಕೇಸ್. ಚಾರ್ಚ್‌ಶೀಟ್ ಹಾಕಿದರೆ ಸಾಲದು. ರಾಜ್ಯಕ್ಕೆ ಒಂದು ಸಂದೇಶ ರವಾನೆಯಾಗುವಂತೆ ತನಿಖೆ ಮಾಡಬೇಕು. ಇವರ ಮೇಲೆ ರೌಡಿಶೀಟರ್ ಓಪನ್ ಆಗಬೇಕು. ಬೇಲ್ ಮೇಲೆ ಬಂದರೆ ಗೂಂಡಾ ಆ್ಯಕ್ಟ್ ರಿಜಿಸ್ಟರ್ ಆಗಬೇಕು. ಹೊರಗೆ ಬರಲು ಬಿಡಬಾರದು. ಬಂದರೆ ಗಡಿಪಾರು ಮಾಡಬೇಕು. ಇದರಿಂದ ಸಮಾಜದಲ್ಲಿ ಆತ್ಮವಿಶ್ವಾಸ ತುಂಬಿದ ಹಾಗೆ ಆಗುತ್ತದೆ" ಎಂದರು.
"ನೈತಿಕ ಪೊಲೀಸಗಿರಿ ಹೆಸರಲ್ಲಿ ಯಾವುದೇ ಗುಂಪು ಇನ್ನೊಂದು ಜಾತಿಯ ಗುಂಪಿನ ಮೇಲೆ ಕಾನೂನು ಕೈಗೆ ತೆಗೆದುಕೊಳ್ಳಲು ಬಿಡಬಾರದು. ನೈತಿಕ ಪೊಲೀಸ್‌ಗಿರಿ ಮಾಡುವುದಾದರೆ ಪೊಲೀಸರು ಯಾಕೆ ಬೇಕು? ಇದನ್ನು ಮಟ್ಟ ಹಾಕಲು ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ" ಎಂದು ಅಬ್ದುಲ್ ಅಜೀಂ ತಿಳಿಸಿದರು.
"ಸಂತ್ರಸ್ತೆ ಜೊತೆ ಮಾತಾಡಿದ್ದೇನೆ. ನಾನು ಕೆಲಸ ಕೊಡಿಸುತ್ತೇನೆ ಎಂದು ಹೇಳಿದೆ. ಆದರೆ ಕೆಲಸ ಬೇಡ, ಒಂದು ಮನೆ ಬೇಕು ಎಂದಿದ್ದಾರೆ. ಜಮೀರ್ ಅಹ್ಮದ್ ಖಾನ್ ವಸತಿ ಸಚಿವರಿದ್ದಾರೆ. ಮನೆ ಮಂಜೂರು ಮಾಡುವಂತೆ ಅವರಿಗೆ ಪತ್ರ ಬರೆಯುವೆ" ಎಂದು ತಿಳಿಸಿದರು.
ಇದನ್ನೂ ಓದಿ:'ಬಿಜೆಪಿ ನಿಯೋಗಕ್ಕೆ ಹೆದರಿ ಸರ್ಕಾರದಿಂದ ಹಾವೇರಿ ಅತ್ಯಾಚಾರ ಸಂತ್ರಸ್ತೆಯ ಲೀಗಲ್ ಕಿಡ್ನಾಪ್'