ಹಾವೇರಿ: ಜನ್ಮದಿನವನ್ನು ಬಹುತೇಕರು ಕೇಕ್ ಕತ್ತರಿಸಿ, ಅದ್ಧೂರಿ ಊಟ, ಪಾರ್ಟಿಯೊಂದಿಗೆ ಆಚರಣೆ ಮಾಡುವುದು ಸಾಮಾನ್ಯ. ಆದರೆ ಇದಕ್ಕೆ ವಿಭಿನ್ನವಾಗಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಮಾಲತೇಶ ದೇವಸ್ಥಾನದ ಅರ್ಚಕ ಸಂತೋಷ ಭಟ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಭಾನುವಾರ ತಮ್ಮ 45ನೇ ಹುಟ್ಟುಹಬ್ಬವನ್ನು ಅವರು 25 ಕುಟುಂಬದವರಿಗೆ ಗೋವುಗಳನ್ನು ದಾನವಾಗಿ ನೀಡುವ ಮೂಲಕ ಮಹತ್ಕಾರ್ಯ ಮಾಡಿದ್ದಾರೆ.
ಗೋವು ದಾನ ಮಾಡಿದ ದೇವರಗುಡ್ಡದ ಅರ್ಚಕರು ಸಂತೋಷ ಭಟ್ ಅವರು ದೇವರಗುಡ್ಡ ಗ್ರಾಮದ 25 ಕಡುಬಡವರಿಗೆ ಆಕಳುಗಳನ್ನು ನೀಡುವ ಮೂಲಕ ಜನ್ಮದಿನ ಆಚರಿಸಿದರು. ಈ ವಿಶಿಷ್ಟ ಜನ್ಮದಿನ ಆಚರಣೆ ವೇಳೆ ನೆಗಳೂರು ಹಿರೇಮಠದ ಶ್ರೀಗಳು ಮತ್ತು ದಾವಣಗೆರೆ ಎಸ್ಪಿ ರಿಷ್ಯಂತ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ ಭಟ್, ಗ್ರಾಮದ 45 ಕಡುಬಡವರಿಗೆ ಗೋವುಗಳನ್ನು ದಾನ ಮಾಡುವ ಉದ್ದೇಶವಿತ್ತು. ಆದರೆ ಹಸುಗಳು ಸಿಗದ ಕಾರಣ 25 ಜನರಿಗೆ ಆಕಳನ್ನು ದಾನ ಮಾಡಿದ್ದೇನೆ. ಗ್ರಾಮದಲ್ಲಿ ಸಾಕಷ್ಟು ಕಡುಬಡವರು, ಕೂಲಿ ಕಾರ್ಮಿಕರಿದ್ದಾರೆ. ಅವರ ಬದುಕು ಹಸನಾಗಲಿ, ಅವರ ಬದುಕಿಗೆ ಸ್ವಲ್ಪಮಟ್ಟಿನ ಸಹಾಯವಾದರೂ ಆಗಲೆಂದು ಈ ಕಾರ್ಯ ಮಾಡಿದ್ದೇನೆ ಎಂದು ತಿಳಿಸಿದರು.
ಹುಟ್ಟುಹಬ್ಬದಂದು 25 ಕುಟುಂಬಗಳಿಗೆ ಗೋವು ದಾನ ಮಾಡಿದ ದೇವರಗುಡ್ಡದ ಅರ್ಚಕ ನಂತರ ನಡೆದ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ವಲಯಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಏಲಕ್ಕಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರೋಗ್ಯ, ಶಿಕ್ಷಣ, ಮಾಧ್ಯಮ ಸೇರಿದಂತೆ ವಿವಿಧ ವಲಯಗಳ ಸಾಧಕರಿಗೆ ಸನ್ಮಾನಿಸಲಾಯಿತು. ಆಕಳುಗಳನ್ನು ಸ್ವೀಕರಿಸಿದ ಗ್ರಾಮಸ್ಥರು ಸಂತೋಷ ಭಟ್ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು. ಅವರು ನೀಡಿದ ಆಕಳುಗಳನ್ನು ಸಾಕಿ ಬದುಕು ಕಟ್ಟಿಕೊಳ್ಳುವ ಇಂಗಿತ ವ್ಯಕ್ತಪಡಿಸಿದರು.
ಇದನ್ನೂ ಓದಿ:ಎಳನೀರು ಮಾರಾಟ.. ಕುಟುಂಬ ನಿರ್ವಹಣೆ ಜೊತೆ ಮಕ್ಕಳನ್ನು ವಿದ್ಯಾವಂತರನ್ನಾಗಿಸಿದ ಮಹಾತಾಯಿ