ಹಾವೇರಿ :ಚಿತ್ರ ವೀಕ್ಷಣೆ ವೇಳೆಯುವಕನ ಮೇಲೆ ಶೂಟೌಟ್ ನಡೆದ ಕಾರಣ ಜಿಲ್ಲೆಯ ಶಿಗ್ಗಾವಿಯ ರಾಜಶ್ರೀ ಚಿತ್ರಮಂದಿರದಲ್ಲಿ ಬುಧವಾರ ಪ್ರದರ್ಶನಗಳನ್ನು ಬಂದ್ ಮಾಡಲಾಗಿದ್ದು, ಚಿತ್ರಮಂದಿರದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮಂಗಳವಾರ ರಾತ್ರಿ ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ರಿವಾಲ್ವಾರ್ನಿಂದ ಗುಂಡು ಹಾರಿಸಲಾಗಿತ್ತು.
ಇದರಲ್ಲಿ ಯುವಕನೋರ್ವ ಗಾಯಗೊಂಡಿದ್ದ. ಈ ಹಿನ್ನೆಲೆಯಲ್ಲಿ ಚಿತ್ರಮಂದಿರಕ್ಕೆ ಇಂದು ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲಿಸಿತು. ಸ್ಥಳಕ್ಕಾಗಮಿಸಿದ ಎಸ್ಪಿ ಹನುಮಂತರಾಯ ಸಹ ಘಟನೆ ಕುರಿತಂತೆ ಮತ್ತೊಮ್ಮೆ ಮಾಹಿತಿ ಕಲೆ ಹಾಕಿದರು.
ಶಿಂಗ್ಗಾವಿ ಚಿತ್ರಮಂದಿರದಲ್ಲಿ ಶೂಟೌಟ್ ಪ್ರಕರಣ ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ, ಆರೋಪಿ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ. ಆದಷ್ಟು ಶೀಘ್ರ ಆರೋಪಿಯ ಬಂಧನ ಆಗಲಿದೆ. ತಜ್ಞರ ತಂಡದವರು ಘಟನೆ ನಡೆದ ಸ್ಥಳದಲ್ಲಿ ಪರಿಶೀಲಿಸಿದ್ದಾರೆ.
ತನಿಖೆಯ ನಂತರ ಘಟನೆಗೆ ಕಾರಣ ಏನು ಎಂಬುದು ಗೊತ್ತಾಗಲಿದೆ. ಆರೋಪಿ ಒಬ್ಬನೇ ಇದ್ದಾನಾ ಅಥವಾ ಎಷ್ಟು ಜನರಿದ್ದಾರೆ ಎಂಬುದು ತನಿಖೆ ನಂತರ ಬೆಳಕಿಗೆ ಬರಲಿದೆ. ಅಲ್ಲದೇ, ಗುಂಡು ಹಾರಿಸಿದ್ದು ಯಾವ ರಿವಾಲ್ವಾರ್ನಿಂದ ಎಂಬುದು ಕೂಡ ತಜ್ಞರ ತಂಡದ ಪರಿಶೀಲನೆ ನಂತರ ಗೊತ್ತಾಗಲಿದೆ ಎಂದರು.
ಇದನ್ನೂ ಓದಿ:ಶಿಗ್ಗಾವಿಯಲ್ಲಿ ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಗುಂಡು ಹಾರಿಸಿದ ದುಷ್ಕರ್ಮಿ.. ಓರ್ವನಿಗೆ ಗಾಯ