ಹಾವೇರಿ:ಪೊಲೀಸರೆಂದರೆ ಸಾಕು ಕಣ್ಮುಂದೆ ಬರುವ ಚಿತ್ರಣ ದಪ್ಪನೆ ಮೀಸೆ, ಕೈಯಲ್ಲಿ ಲಾಠಿ ಸದಾ ಗಂಭೀರವಾಗಿರುವ ಮುಖ. ಆದರೆ, ಹಾವೇರಿ ಸಶಸ್ತ್ರ ಮೀಸಲು ಪಡೆಯಲ್ಲಿ ಇರುವ ಈ ಕಾನ್ಸ್ಟೇಬಲ್ ಚಿತ್ರಣವೇ ಬೇರೆ. ಕಾನ್ಸ್ಟೇಬಲ್ ರಮೇಶ್ ಎಂಬುವವರು ಸ್ನೇಕ್ ರಮೇಶ್ ಎಂದೇ ಖ್ಯಾತಿಗಳಿಸಿದ್ದಾರೆ. ಸುಮಾರು 23 ವರ್ಷಗಳಿಂದ ಪೊಲೀಸ್ ಇಲಾಖೆಗೆ ಸೇರಿದ ಇವರು, ಕಳೆದ 20 ವರ್ಷಗಳಿಂದ ಉರಗಗಳ ರಕ್ಷಣೆಗೆ ನಿಂತಿದ್ದಾರೆ.
ಹಾವೇರಿ ಸೇರಿದಂತೆ ಸುತ್ತ - ಮುತ್ತಲಿನ ಪ್ರದೇಶಗಳಲ್ಲಿ ಹಾವುಗಳನ್ನು ಹಿಡಿದು ರಕ್ಷಣೆ ಮಾಡುತ್ತಿದ್ದಾರೆ. ಯಾರ ಮನೆಗಾದರೂ ಹಾವು ಬಂದರೆ ಸಾಕು ಮೊದಲ ಕರೆ ಹೋಗುವುದು ರಮೇಶ್ ಅವರಿಗೆ. ಹಾವುಗಳನ್ನು ರಕ್ಷಿಸಿ ನಂತರ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರುತ್ತಾರೆ. ಈವರೆಗೆ ರಮೇಶ್ 7,600 ಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ನಾಗರ ಹಾವು, ನೀರಾವು, ಕೊಳಕಮಂಡಲ, ಆಭರಣ ಹಾವು ಸೇರಿದಂತೆ ವಿವಿಧ ತರದ ಹಾವುಗಳನ್ನು ರಕ್ಷಿಸಿದ್ದಾರೆ. ಅಲ್ಲದೇ, ಗಾಯಗೊಂಡ ಹಾವುಗಳನ್ನು ರಮೇಶ್ ಮನೆಯಲ್ಲಿ ರಕ್ಷಿಸಿ ಅವುಗಳಿಗೆ ಔಷಧೋಪಚಾರ ಸಹ ಮಾಡುತ್ತಾರೆ. ಕಳೆದ ತಿಂಗಳು ಸ್ಥಳೀಯರಿಂದ ಹೊಡೆಸಿಕೊಂಡು ಆನಾರೋಗ್ಯದಿಂದ ಬಳಲುತ್ತಿದ್ದ ನಾಗರ ಹಾವನ್ನ ಇವರು ರಕ್ಷಣೆ ಮಾಡಿದ್ದಾರೆ.