ಹಾವೇರಿ:ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರ್ಕಾರ ಹಲವು ಯೋಜನೆಗಳನ್ನ ಜಾರಿಗೆ ತರುತ್ತವೆ. ಆದರೆ ಕೆಲವೊಂದು ಯೋಜನೆಗಳು ಕೆಲ ಕಾಲ ನಿರ್ವಹಿಸಿದರೆ, ಇನ್ನೂ ಕೆಲವು ಯೋಜನೆಗಳು ಅರ್ಧಕ್ಕೆ ನಿಂತಿವೆ. ಇದಕ್ಕೆ ತಾಜಾ ಉದಾಹರಣೆ ಜಿಲ್ಲಾ ಕೇಂದ್ರ ಹಾವೇರಿಯಲ್ಲಿರುವ ಇಂದಿರಾ ಕ್ಯಾಂಟೀನ್.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಜಾರಿಗೆ ಬಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆ ಆರಂಭದಲ್ಲಿ ಹಲವು ಅಡೆತಡೆ ಎದುರಿಸಿತ್ತು. ಜಿಲ್ಲೆಯ 8 ತಾಲೂಕುಗಳಲ್ಲಿ ಕ್ಯಾಂಟೀನ್ ಆರಂಭಿಸಲು ಸೂಚಿಸಲಾಗಿತ್ತಾದರೂ, ಅದರಲ್ಲಿ ಕಾರ್ಯನಿರ್ವಹಣೆ ಆರಂಭಿಸಿದ್ದು ಮಾತ್ರ ಹಾವೇರಿ, ರಾಣೆಬೆನ್ನೂರು ಮತ್ತು ಹಿರೇಕೆರೂರಿನಲ್ಲಿ ಕೇವಲ 3 ಕ್ಯಾಂಟೀನ್ಗಳು. ಉಳಿದ 5 ಕ್ಯಾಂಟೀನ್‌ಗಳ ಉಪಕರಣಗಳು ಮಳೆ, ಬಿಸಿಲಿಗೆ ಸಿಲುಕಿ ತುಕ್ಕು ಹಿಡಿಯುತ್ತಿವೆ.
ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಸ್ಥಳೀಯರ ಆಗ್ರಹ ಜಿಲ್ಲಾ ಕೇಂದ್ರದಲ್ಲಿರುವ ಇಂದಿರಾ ಕ್ಯಾಂಟೀನ್ ಆರಂಭವಾದಾಗ ಇಲ್ಲಿಯ ಬಡವರು, ಕೂಲಿ ಕಾರ್ಮಿಕರು, ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಗಳು ಅವರ ಸಂಬಂಧಿಕರಿಗೆ ಸಾಕಷ್ಟು ಅನುಕೂಲವಾಗಿತ್ತು. 5 ರೂ.ಗೆ ಉಪಹಾರ ಮತ್ತು 10 ರೂ.ಗೆ ಊಟ ಸಿಗುತ್ತಿತ್ತು. ಕ್ಯಾಂಟೀನ್ ಜಿಲ್ಲಾ ಆಸ್ಪತ್ರೆ, ತರಕಾರಿ ಮಾರುಕಟ್ಟೆ ಮತ್ತು ಪಶು ಆಸ್ಪತ್ರೆ ಸೇರಿದಂತೆ ಪ್ರಮುಖ ಸ್ಥಳದಲ್ಲಿದ್ದ ಕಾರಣ ಸಾಕಷ್ಟು ಜನರು ಆಗಮಿಸುತ್ತಿದ್ದರು. ಕೆಲವೊಂದು ಸಲ ಕ್ಯಾಂಟೀನ್ ನಲ್ಲಿ ಟೋಕನ್ ಸಿಗದೆ ಊಟ ಸಿಗದೆ ಬಡವರು ಮರಳಿರುವ ಉದಾಹರಣೆಗಳು ಸಹ ಇವೆ. ಆದರೆ ಗುತ್ತಿಗೆದಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕ್ಯಾಂಟೀನ್ ಬಂದ್ ಆಗಿದೆ.
ಆರಂಭದಲ್ಲಿ ಕೆಲಕಾಲ ಆರಂಭ ಕೆಲಕಾಲ ಬಂದ್ ಆಗುತ್ತಿದ್ದ ಇಂದಿರಾ ಕ್ಯಾಂಟೀನ್ ಈ ಬಾರಿ ಬಂದ್ ಆಗಿ ಮೂರ್ನಾಲ್ಕು ತಿಂಗಳುಗಳೇ ಕಳೆದಿವೆ. ನಿತ್ಯ ಬಡವರು ಕೂಲಿ ಕಾರ್ಮಿಕರು ಇಂದಿರಾ ಕ್ಯಾಂಟೀನ್‌ಗೆ ಎಡತಾಕುವುದೇ ಕೆಲಸವಾಗಿದೆ. ಕ್ಯಾಂಟೀನ್ ಆರಂಭವಾಗಿದೆ ಎನ್ನುವ ಖುಷಿಯಲ್ಲಿ ಬರುವ ಬಡವರು ಕೂಲಿ ಕಾರ್ಮಿಕರು ಕ್ಯಾಂಟೀನ್ ಬಂದ್ ಆಗಿರುವುದನ್ನು ನೋಡಿ ಮುಖ ಸಣ್ಣದು ಮಾಡಿ ಖಾಸಗಿ ಹೋಟೆಲ್‌ಗಳಿಗೆ ಹೋಗುತ್ತಿದ್ದಾರೆ. 50 ರಿಂದ 100 ರೂ. ಕೊಟ್ಟು ಊಟ ಮಾಡುತ್ತಿದ್ದಾರೆ. ಹಾಗಾಗಿ ತಾವು ದುಡಿದ ಹಣವೆಲ್ಲಾ ಊಟ ಮತ್ತು ಉಪಹಾರಕ್ಕೆ ವ್ಯಯವಾಗುತ್ತಿದೆ. ಜಿಲ್ಲಾಡಳಿತ ಆದಷ್ಟು ಬೇಗ ಇಂದಿರಾ ಕ್ಯಾಂಟೀನ್ ಪುನಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಕೇಂದ್ರ ಹಾವೇರಿಯಲ್ಲಿದ್ದ ಇಂದಿರಾ ಕ್ಯಾಂಟೀನ್ ಮಾತ್ರವಲ್ಲದೇ, ಹಿರೇಕೆರೂರು ಮತ್ತು ರಾಣೆಬೆನ್ನೂರು ನಗರಗಳಲ್ಲಿರುವ ಇಂದಿರಾ ಕ್ಯಾಂಟೀನ್ ಬಂದ್ ಆಗಿವೆ. ಜಿಲ್ಲಾಡಳಿತ ಈ ಕಡೆ ಗಮನ ಹರಿಸಿ ಬಡವರು, ಕೂಲಿ ಕಾರ್ಮಿಕರ ಸಹಾಯಕ್ಕೆ ಬರುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.