ರಾಣೆಬೆನ್ನೂರು: ನಗರದ ಪ್ರಮುಖ ಬೀದಿಗಳಲ್ಲಿ ನಾಯಿ, ಹಂದಿಗಳ ಹಾವಳಿ, ಮುಖ್ಯ ರಸ್ತೆಯಲ್ಲಿ ಮತ್ತು ಬಸ್ ನಿಲ್ದಾಣ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಕರುಗಳು ಮಲಗುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಇನ್ನು ಬೀದಿನಾಯಿಗಳ ಹಾವಳಿಯಿಂದ ಜನರು ರೋಸಿಹೋಗಿದ್ದಾರೆ.
ಭೂತಗಲ್ಲಿ ಮತ್ತು ಖತೀಬ ಗಲ್ಲಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿವೆ. ಇಲ್ಲಿ ಮಾಂಸ ಮಾರಾಟದ ಅಂಗಡಿಗಳು ಇರುವುದರಿಂದ ನಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ವಾಸವಾಗಿವೆ. ವಾಲ್ಮೀಕಿ ಓಣಿ, ಹಂಡೆ ಆಸ್ಪತ್ರೆ, ಸರ್ಕಾರಿ ಹೆರಿಗೆ ಆಸ್ಪತ್ರೆ, ಅಂಚೆ ಕಚೇರಿ ವೃತ್ತದಲ್ಲಿ ಬೀದಿ ನಾಯಿಗಳು ಠಿಕಾಣಿ ಹೂಡುತ್ತಿವೆ. ಈ ವೃತ್ತ ಬೀದಿ ನಾಯಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.
ಬೀದಿ ನಾಯಿ, ಹಂದಿ ಹಾವಳಿ ತಡೆಗಟ್ಟಲು ಅನೇಕ ಬಾರಿ ಮನವಿ ಮಾಡಿದ್ದಾರೆ. ಆದರೆ, ಪ್ರಾಣಿದಯಾ ಸಂಘದ ಸದಸ್ಯರ ಒತ್ತಡದಿಂದ ನಗರಸಭೆ ಸಿಬ್ಬಂದಿ ಯಾವುದೇ ಕ್ರಮ ತೆಗೆದುಕೊಳ್ಳದೆ ಕೈಚೆಲ್ಲಿ ಕುಳಿತಿದ್ದಾರೆ. ನಗರಸಭೆ ಅಧಿಕಾರಿಗಳ ಪ್ರಕಾರ ಬೀದಿ ನಾಯಿಗಳನ್ನು ಕೊಲ್ಲಲು ಹೋದರೆ ಸುಪ್ರಿಂಕೋರ್ಟ್ ತೀರ್ಪಿನ ಉಲ್ಲಂಘನೆಯಾಗುತ್ತದೆ. ಅವುಗಳನ್ನು ನಿಯಂತ್ರಿಸಲು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸುವುದೇ ಒಂದು ಪರಿಹಾರವಾಗಿದೆ. ಬೀದಿ ನಾಯಿಗಳ ನಿಯಂತ್ರಣ ಮಾಡುವಲ್ಲಿ ಅತಿ ದೊಡ್ಡ ಸವಾಲಿನ ಕೆಲಸವಾಗಿದೆ ಸಾರ್ವಜನಿಕರು ಹೇಳುತ್ತಿದ್ದಾರೆ.
ಮಾರುತಿನಗರ, ಕುರುಬಗೇರಿ ವೃತ್ತ, ದೇವರಗುಡ್ಡ ರಸ್ತೆ, ಹುಣಸೀಕಟ್ಟಿ ಕ್ರಾಸ್, ಹರಳಯ್ಯನಗರ, ಆಂಜನೇಯ ಬಡಾವಣೆ, ಮೇಡ್ಲೇರಿ ಕ್ರಾಸ್, ಶ್ರೀರಾಮನಗರ, ಸೈಕಲ್‌ಗಾರ ಓಣಿ, ಮೇಡ್ಲೇರಿ ವೃತ್ತ, ರಂಗನಾಥ ನಗರ, ಬಸ್ ನಿಲ್ದಾಣದ ಬಳಿ ಬೀದಿ ನಾಯಿಗಳ ಅಧಿಕವಾಗಿವೆ.