ಹಾವೇರಿ: ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು ಗ್ರಾಮದಲ್ಲಿನ ನದಿ ಬಳಿಯ ಮರಗಳಲ್ಲಿ 30ಕ್ಕೂ ಅಧಿಕ ಮಂಗಗಳು ಸಿಲುಕಿಗೊಂಡಿವೆ. ಪ್ರವಾಹ ಬಂದಾಗಿನಿಂದ ಈ ಮಂಗಗಳು ಇಲ್ಲಿ ವಾಸ್ತವ್ಯವಾಗಿದ್ದು, ಗ್ರಾಮಸ್ಥರು ಈ ಮಂಗಗಳಿಗೆ ನಿತ್ಯ ಮೂರು ಬಾರಿ ಆಹಾರ ನೀಡಿ ಬರುತ್ತಿದ್ದಾರೆ.
ಹಣ್ಣು, ತರಕಾರಿ ಸೇರಿದಂತೆ ಮಂಗಗಳಿಗೆ ಬೇಕಾಗಿರುವ ಆಹಾರ ಪದಾರ್ಥಗಳನ್ನು ಗ್ರಾಮಸ್ಥರು ತೆಪ್ಪದಲ್ಲಿ ತಗೆದುಕೊಂಡು ಹೋಗುತ್ತಾರೆ. ನಂತರ ಮರದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಚೀಲದಲ್ಲಿ ಕಟ್ಟಿ ಬರುತ್ತಾರೆ. ಗ್ರಾಮಸ್ಥರು ಆಹಾರ ಕಟ್ಟಿ ಬರುತ್ತಿದ್ದಂತೆ ಮಂಗಗಳು ಹಣ್ಣು, ತರಕಾರಿ ಸೇವಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ.
ನದಿ ಬಳಿಯ ಮರಗಳಲ್ಲಿ ಸಿಲುಕಿದ ಮಂಗಗಳು:
ಹಾವೇರಿ ಜಿಲ್ಲೆಯಲ್ಲಿ ಮಳೆರಾಯ ಮಂಗಳವಾರ ಸಹ ಬಿಡುವು ನೀಡಿದ್ದಾನೆ. ಪ್ರವಾಹ ಪರಿಸ್ಥಿತಿ ದಿನದಿಂದ ದಿನಕ್ಕೆ ಸ್ವಲ್ಪ ಕಡಿಮೆಯಾಗುತ್ತಿದೆ. ಈ ಮಧ್ಯೆ ಸವಣೂರು ತಾಲೂಕಿನ ಕಳಸೂರು ಗ್ರಾಮದಲ್ಲಿನ ನದಿ ಬಳಿಯ ಮರಗಳಲ್ಲಿ 30ಕ್ಕೂ ಅಧಿಕ ಮಂಗಗಳು ಸಿಲುಕಿಗೊಂಡಿವೆ. ಪ್ರವಾಹ ಬಂದಾಗಿನಿಂದ ಈ ಮರಗಳಲ್ಲಿ ಸಿಲುಕಿರುವ ಈ ಮಂಗಗಳಿಗೆ ಸುತ್ತಲೂ ನೀರು ಆವರಿಸಿದ್ದು, ಬೇರೆ ಕಡೆ ಹೋಗಲು ಸಾಧ್ಯವಾಗುತ್ತಿಲ್ಲ.
ಮಂಗಗಳಿಗೆ ಆಹಾರ ಪೂರೈಕೆ:
ಈ ಮಂಗಗಳಿರುವುದು ಜಾಲಿಮರಗಳ ಸಾಲಿನಲ್ಲಿ. ಇಲ್ಲಿ ಇವಕ್ಕೆ ಆಹಾರ ಮರೀಚಿಕೆಯಾಗಿತ್ತು. ಆದರೆ, ಗ್ರಾಮದ ಹಿರಿಯರೊಬ್ಬರು ಈ ಮಂಗಗಳನ್ನು ನೋಡಿ ತೆಪ್ಪದ ಮೂಲಕ ಆಹಾರ ಪೂರೈಸಲು ಮುಂದಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸೇರಿಕೊಂಡು ಕಳೆದ ನಾಲ್ಕು ದಿನದಿಂದ ಈ ಮಂಗಗಳಿಗೆ ಆಹಾರ ಪೂರೈಸುತ್ತಿದ್ದಾರೆ.