ಹಾವೇರಿ : ಪ್ರಸ್ತುತ ವರ್ಷ ಮುಂಗಾರು ಮಳೆ ಸಮರ್ಪಕವಾಗಿಲ್ಲ. ಹೀಗಾಗಿ, ಬರಗಾಲದ ಛಾಯೆ ಅವರಿಸಿದೆ. ರಾಜ್ಯದ ಪ್ರಮುಖ ಕೆರೆಕಟ್ಟೆಗಳು ಬೇಸಿಗೆ ಬರುವ ಮುನ್ನವೇ ಬರಿದಾಗಲಾರಂಭಿಸಿವೆ. ಇದಕ್ಕೆ ಹಾವೇರಿಯ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಹೆಗ್ಗೇರಿ ಕೆರೆ ಕೂಡ ಹೊರತಾಗಿಲ್ಲ.
ಹೌದು, ಹೆಗ್ಗೇರಿ ಕೆರೆ ಬರಿದಾದರೆ ಈ ನೀರನ್ನೇ ಅವಲಂಬಿಸಿರುವ ಸಾವಿರಾರು ರೈತರ ಬದುಕು ಅಸಹನೀಯವಾಗಲಿದೆ. ಕೆರೆ ತುಂಬಿದರೆ ಸುತ್ತಮುತ್ತಲಿನ ಗ್ರಾಮಗಳ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಆದರೆ, ಪ್ರಸ್ತುತ ವರ್ಷದ ಅಸಮರ್ಪಕ ಮಳೆಯಿಂದಾಗಿ ಹೆಗ್ಗೇರಿ ಕೆರೆ ಒಡಲು ಬರಿದಾಗಲಾರಂಭಿಸಿದೆ. ಇದರಿಂದ ಎಚ್ಚೆತ್ತ ಹಾವೇರಿ ನಗರಸಭೆ, ಇದೀಗ ಕೆರೆಗೆ ತುಂಗಭದ್ರಾ ಕಾಲುವೆಯಿಂದ ನೀರು ಹರಿಸಲಾರಂಭಿಸಿದೆ. ಹೀಗಾಗಿ, ಹೆಗ್ಗೇರಿ ದಿನದಿಂದ ದಿನಕ್ಕೆ ಮೈದುಂಬಿಕೊಳ್ಳಲಾರಂಭಿಸಿದೆ. ನೇರವಾಗಿ ಯುಟಿಪಿ ಕಾಲುವೆಯಿಂದ ನೀರು ಹಾಯಿಸಲು ಬಾರದ ಕಾರಣ ಚೌಡಯ್ಯದಾನಪುರದಿಂದ ಕಾಲುವೆಯಲ್ಲಿನ ನೀರು ಎತ್ತರಕ್ಕೆ ಏರಿಸಿ ಅಲ್ಲಿಂದ ಹೆಗ್ಗೇರಿಗೆ ನೀರು ಹರಿಸಲಾಗುತ್ತಿದೆ. ಕೆರೆಗೆ ನೀರು ಬರುತ್ತಿರುವುದು ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಸಂತಸ ನೀಡಿದೆ.
" ಈ ವರ್ಷ ಮಳೆರಾಯ ಕೈ ಕೊಟ್ಟಿದ್ದಾನೆ. ಮುಂಗಾರು ನಂಬಿಕೊಂಡು ಬಿತ್ತನೆ ಮಾಡಿದ ಬೆಳೆಗಳು ಒಣಗಲಾರಂಭಿಸಿವೆ. ಕೊನೆಯ ಪಕ್ಷ ಕೆರೆಯಾದರೂ ತುಂಬಿದರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಕೊಳವೆ ಬಾವಿಯಿಂದ ನೀರು ಹರಿಸಿ ಬೆಳೆ ಬೆಳೆಯಬಹುದು" ಎನ್ನುತ್ತಿದ್ದಾರೆ ರೈತರು.
"ಕೆರೆಯನ್ನು ನಂಬಿ ತರಕಾರಿ, ಮೆಕ್ಕೆಜೋಳ, ಹತ್ತಿ, ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಮಧ್ಯೆ ಕೆರೆಯ ನೀರನ್ನು ಹಾವೇರಿ ನಗರದ 24 x7 ಕುಡಿಯುವ ನೀರಿನ ಯೋಜನೆಗೆ ಸಹ ಬಳಸುವ ಯೋಚನೆ ಇದೆ. ಕೆರೆಗೆ ನಗರಸಭೆ ತಡೆ ಬೇಲಿ ಹಾಕಿದ್ದು, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ನಗರಸಭೆ ಅಧಿಕಾರಿಗಳು ಕೇವಲ ಕೆರೆಯ ಒಂದು ದಡದ ಮೇಲೆ ತಂತಿಬೇಲಿ ಹಾಕಿದ್ದಾರೆ, ಕೆರೆಯ ಸುತ್ತ ತಂತಿ ಬೇಲಿ ಹಾಕಿದರೆ ಒತ್ತುವರಿ ತಡೆಗಟ್ಟಬಹುದು" ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.