ಹಾವೇರಿ: ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆ ಮಾವು. ಇಲ್ಲಿನ ಹಾನಗಲ್, ಶಿಗ್ಗಾವಿ, ಹಾವೇರಿ ಮತ್ತು ಹಿರೇಕೆರೂರು ತಾಲೂಕುಗಳಲ್ಲಿ ಸಹಸ್ರಾರು ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಕೇಂದ್ರ ಸರ್ಕಾರದಿಂದ ಒಂದು ಜಿಲ್ಲೆ ಒಂದು ಉತ್ಪನ್ನದಲ್ಲಿ ಹಾವೇರಿ ಮಾವು ಬೆಳೆಯುವ ಜಿಲ್ಲೆಯೆಂದು ಗುರುತಿಸಲಾಗಿದೆ. ಆದರೆ ವಾತಾವರಣದಲ್ಲಿನ ಏರುಪೇರಿನಿಂದಾಗಿ ಮಾವು ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಕಾಲಿಕವಾಗಿ ಸುರಿದ ಮಳೆ ಮತ್ತು ಮಂಜಿನಿಂದಾಗಿ ಮಾವಿನ ಹೂವುಗಳಲ್ಲಿ ಸರಿಯಾಗಿ ಕಾಯಿಕಟ್ಟಿಲ್ಲ. ಹೆಚ್ಚು ಹೂ ಬಿಟ್ಟರು ಸಹ ಅಕಾಲಿಕ ಮಳೆ ಮತ್ತು ಮಂಜಿನಿಂದ ಹೂ ಉದುರಿವೆ. ಇದರಿಂದಾಗಿ ಮಾವಿನ ಗಿಡಗಳು ಹೂವಿನ ನೆನೆಗೆ ಬೆರಳೆಣಿಕೆಯಷ್ಟು ಕಾಯಿ ಹಿಡಿದುಕೊಂಡಿವೆ. ಈ ರೀತಿ ಬಿಟ್ಟ ಮಾವಿನಕಾಯಿಗಳಿಗೆ ಮಾರ್ಚ್ ತಿಂಗಳಿನಲ್ಲಿ ಸುರಿದ ಮಳೆ ಹಾನಿ ತಂದಿದೆ. ಮರದಲ್ಲಿ ಸಣ್ಣ ಸಣ್ಣ ಕಾಯಿಗಳು ಹಣ್ಣುಗಳಂತಾಗಿ ಉದುರಲಾರಂಭಿಸಿವೆ. ಇನ್ನು ಕೆಲ ಮಾವಿನ ಗಿಡಗಳು ಬೇಗ ಹೂವು ಬಿಟ್ಟರೆ, ಮತ್ತೆ ಕೆಲವು ಈಗ ಹೂ ಬಿಡಲಾರಂಭಿಸಿವೆ. ಇದ್ದ ಕಾಯಿಗಳಿಗೆ ಮಂಗಗಳ ಕಾಟದಿಂದ ಮಾವು ಬೆಳೆಗಾರ ಸಂಕಷ್ಟಕ್ಕೆ ಈಡಾಗಿದ್ದಾರೆ.
ಪ್ರತಿ ವರ್ಷ ಮಾವಿನ ಮರಗಳು ಎಲೆಗಳು ಕಾಣದಂತೆ ಹೂ ಬಿಡುತ್ತಿದ್ದವು. ಅದರಂತೆ, ಕಾಯಿಗಳನ್ನು ಬಿಟ್ಟ ಮಾವಿನ ಮರದ ಟೊಂಗೆಗಳಿಗೆ ಎಷ್ಟು ರೈತರು ಆಸರೆಗಾಗಿ ಕಟ್ಟಿಗೆ ನಿಲ್ಲಿಸುತ್ತಿದ್ದರು. ಅಲ್ಲದೇ ತೋಟದಲ್ಲಿ ಮಾವು ಬಿಟ್ಟಿದ್ದನ್ನು ನೋಡಿ ಮಧ್ಯವರ್ತಿಗಳು ಮಾವು ಬೆಳೆಗಾರನಿಂದ ತೋಟ ಲೀಸ್‌ಗೆ ಹಾಕಿಸಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಯಾವ ಮಧ್ಯವರ್ತಿಗಳು ತೋಟಗಳತ್ತ ಸುಳಿಯುತ್ತಿಲ್ಲ.
ಮಾವಿನ ಮರಗಳಿಗೆ ಪ್ರತಿ ವರ್ಷದಂತೆ ಈ ವರ್ಷ ಸಹ ಗೊಬ್ಬರ, ಔಷಧಿ ಸಿಂಪಡಿಸಲಾಗಿದೆ. ಈ ವರ್ಷ ಸಹ ಗಿಡಗಳಲ್ಲಿ ಎಲೆ ಕಾಣದಂತೆ ಹೂವು ಬಿಟ್ಟಿದ್ದವು. ಆದರೆ ಅಕಾಲಿಕ ಮಳೆ ಮಂಜು ವಾತಾವರಣದಿಂದ ಕಾಯಿ ಬಿಟ್ಟಿಲ್ಲ. ಕಳೆದ ವರ್ಷ ಒಂದು ಎಕರೆ ಮಾವಿನ ತೋಟದಲ್ಲಿ ಏಳುವರಿ ಟನ್ ಮಾವು ಬೆಳೆದಿದ್ದೆವು. ಅದರಿಂದ ಸುಮಾರು ಮೂರು ಲಕ್ಷ 80 ಸಾವಿರ ರೂ ಆದಾಯ ಬಂದಿತ್ತು. ಆದರೆ ಪ್ರಸ್ತುತ ವರ್ಷ ನೋಡಿದರೆ ಒಂದು ಟನ್ ಮಾವು ಸಿಗುವುದು ಅನುಮಾನ ಎಂದು ಮಾವು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.
ಇಲ್ಲಿಯ ಮಾವು ನೆರೆಯ ರಾಜ್ಯ ಹಾಗೂ ವಿದೇಶಗಳಿಗೆ ರಫ್ತಾಗುತ್ತಿತ್ತು. ಅಫೋಸ್, ತೋತಾಪುರಿ, ನೀಲಂ, ರತ್ನಗಿರಿ ಸೇರಿದಂತೆ ವಿವಿಧ ತಳಿಗಳ ಮಾವು ಇಲ್ಲಿ ಬೆಳೆಯಲಾಗುತ್ತದೆ. ಈ ವರ್ಷ ಮಾವು ಬೆಳೆ ಕಡಿಮೆ ಬಂದಿದೆ . ಕೊನೆಯ ಪಕ್ಷ ದರ ಅಧಿಕ ಸಿಕ್ಕರೆ ಮಾಡಿದ ಖರ್ಚು ಬರುತ್ತದೆ. ಇಲ್ಲದಿದ್ದರೆ ಮಾವು ಸಿಹಿಯಾಗುವ ಬದಲು ರೈತರಿಗೆ ಹುಳಿಯಾಗುವದರಲ್ಲಿ ಎರಡು ಮಾತಿಲ್ಲ ಎನ್ನುತ್ತಿದ್ದಾರೆ ರೈತರು.