ಕರ್ನಾಟಕ

karnataka

ETV Bharat / state

7 ವರ್ಷಗಳಿಂದ ನಿರಂತರ ಪರಿಸರ ಪೂಜೆ: 350ಕ್ಕೂ ಹೆಚ್ಚು ಸಸಿ ನೆಟ್ಟು ಮಕ್ಕಳಂತೆ ಪೋಷಿಸುವ ಹಾವೇರಿಯ ಪರಿಸರಪ್ರೇಮಿ

Haveri man plants more than 350 trees over the past 7 years: ತಾನು ವಿದ್ಯೆ ಕಲಿತ ಶಾಲೆಯಿಂದ ಶುರುವಾದ ಇವರ ಸಸಿ ನೆಡುವ ಕಾರ್ಯ ಇಂದು ಊರಿನೆಲ್ಲೆಡೆ ಹರಡಿದೆ.

ಪರಿಸರ ಪ್ರೇಮಿ ಫಕ್ಕೀರೇಶ ಹುರುಳಿಕೊಪ್ಪಿ
ಪರಿಸರ ಪ್ರೇಮಿ ಫಕ್ಕೀರೇಶ ಹುರುಳಿಕೊಪ್ಪಿ

By ETV Bharat Karnataka Team

Published : Nov 5, 2023, 9:15 AM IST

Updated : Nov 5, 2023, 10:26 AM IST

ಸಸಿ ನೆಟ್ಟು ಮಕ್ಕಳಂತೆ ಪೋಷಿಸುವ ಹಾವೇರಿಯ ಪರಿಸರಪ್ರೇಮಿ

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕು ನಜೀಕಲಕಮಾಪುರ ಗ್ರಾಮದಲ್ಲಿ ಪರಿಸರಪ್ರೇಮಿಯೊಬ್ಬರು ಕಳೆದ ಏಳು ವರ್ಷಗಳಿಂದ ಸುಮಾರು 350ಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ. ಫಕ್ಕೀರೇಶ ಹುರುಳಿಕೊಪ್ಪಿ ಎಂಬವವರೇ ಈ ಪರಿಸರ ಪ್ರೇಮಿ. ಫಕ್ಕೀರೇಶ ತಾವು ಕಲಿತ ಸರ್ಕಾರಿ ಶಾಲೆಯಲ್ಲಿ ಮುನ್ನೂರಕ್ಕೂ ಹೆಚ್ಚು ಸಸಿ ನೆಟ್ಟು ಪೋಷಿಸುತ್ತಿದ್ದಾರೆ.

ಒಂದು ದಿನ ಮುಂಜಾವಿನ ಹೊತ್ತಲ್ಲಿ ಯೋಗಾಭ್ಯಾಸಕ್ಕೆಂದು ಶಾಲೆಗೆ ಹೋಗುತ್ತಿದಾಗ ಆವರಣದಲ್ಲಿ ಗಿಡಗಂಟಿಗಳು ಬೆಳೆದಿದ್ದನ್ನು ಕಂಡು ಶುಚಿಗೊಳಿಸಿದ್ದಾರೆ. ನಂತರ ಸಸಿಗಳನ್ನು ತಂದು ನೆಡಲು ಶುರು ಮಾಡಿದರು. ಆರಂಭದಲ್ಲಿ ಶಾಲೆಯ ಸೌಂದರ್ಯಕ್ಕಾಗಿ ಗಿಡ ನೆಡಲು ಮುಂದಾದ ಫಕ್ಕೀರೇಶ ಅವರಿಗೆ ಗಿಡ ನೆಡುವುದು ಕ್ರಮೇಣ ಹವ್ಯಾಸವಾಯಿತು.

2016ರಿಂದ ಗಿಡ ನೆಡಲಾರಂಭಿಸಿದ ಫಕ್ಕೀರೇಶ ಅವರು ನಜೀಕಲಕಮಾಪುರ ಶಾಲೆ, ಕೆರೆಕಟ್ಟಿ ಸೇರಿದಂತೆ ಅಕ್ಕಪಕ್ಕದ ರಸ್ತೆಗಳಲ್ಲೆಲ್ಲ ಗಿಡ ನೆಡುತ್ತಿದ್ದಾರೆ. ಕೇವಲ ಸಸಿಗಳನ್ನು ನೆಡುವುದಷ್ಟೇ ಅಲ್ಲದೆ ಅವುಗಳಿಗೆ ದಿನನಿತ್ಯ ನೀರುಣಿಸುವುದೂ ಸೇರಿ ಗಿಡಗಳ ಸುತ್ತ ನೀರು ನಿಲ್ಲುವಂತೆ ಗುಂಡಿ ತೋಡುತ್ತಾರೆ. ಗಿಡದ ಸುತ್ತಮುತ್ತ ಬೆಳೆದ ಕಸಕಡ್ಡಿಗಳನ್ನು ಶುಚಿಗೊಳಿಸುತ್ತಾರೆ. ಇವರು ನೆಟ್ಟ ಗಿಡಗಳೀಗ ಮರಗಳಾಗಿವೆ. ಮುಗಿಲೆತ್ತರ ಬೆಳೆದು ನಿಂತು, ಮುದನೀಡುತ್ತಿವೆ. ದಣಿದು ಬಂದ ಜೀವಗಳಿಗೆ ನೆಮ್ಮದಿ ಒದಗಿಸುತ್ತಿವೆ. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗಂತೂ ಈ ಗಿಡಮರಗಳು ಅಚ್ಚುಮೆಚ್ಚಾಗಿವೆ. ಗ್ರಾಮಸ್ಥರು ಫಕ್ಕೀರೇಶರ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.

ಖಾಸಗಿ ಕೆಲಸದಲ್ಲಿರುವ ಫಕ್ಕೀರೇಶ ಮುಂಜಾನೆ 6 ರಿಂದ 9 ಗಂಟೆಯವರೆಗೆ ಪರಿಸರದ ಕೆಲಸ ಮಾಡುತ್ತಾರೆ. ತಾವು ನೆಟ್ಟ ಗಿಡಗಳನ್ನು ಪೋಷಿಸುವ ಕೆಲಸ ಮಾಡುತ್ತಾರೆ. ನಂತರ ಎಂದಿನಂತೆ ತಮ್ಮ ಕಾರ್ಯಕ್ಕೆ ತೆರಳುವರು. ಕಳೆದ ಏಳು ವರ್ಷಗಳಿಂದ ಈ ಕಾಯಕ ಮುಂದುವರೆದಿದೆ.

ಫಕ್ಕೀರೇಶ ಮಾತನಾಡಿ, "ಶಾಲೆಯ ಆವರಣದಲ್ಲಿ ಹೆಬ್ಬೇವು, ತೇಗ, ಮಹಾಘನಿ, ಕಾಡು ಬಾದಾಮಿ, ತೆಂಗು, ಸಿಲ್ವರ್, ನೇರಲೆ, ನುಗ್ಗೆ ಗಿಡ ಸೇರಿದಂತೆ ಹಲವು ವೈವಿಧ್ಯಮಯ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದೇನೆ. ವ್ಯಾಯಾಮ ಮಾಡುವುದರೊಂದಿಗೆ ಪರಿಸರ ಸಂರಕ್ಷಣೆ ಮಾಡುತ್ತಿರುವುದರಿಂದ ಇಲ್ಲಿನ ಶಾಲಾ ಮಕ್ಕಳಿಗೆ ಅನುಕೂಲವಾಗಿದೆ. ಇತ್ತೀಚೆಗೆ ಮಾನವನ ದುರಾಸೆಗೆ ಅರಣ್ಯ ಕಡಿಮೆಯಾಗುತ್ತಿದೆ. ಪರಿಸರ ಅಸಮತೋಲವಾಗಿದೆ. ಇನ್ನಿಲ್ಲದ ಸಮಸ್ಯೆಗಳು ಕಾಡುತ್ತಿವೆ. ಮಾನವ-ಪ್ರಾಣಿ ಸಂಘರ್ಷ ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಪರಿಸರದ ಅಸಮತೋಲನದಿಂದ ಮಳೆ ಕೊರತೆ ಕಾಡುತ್ತಿದ್ದು ಬರ ಆವರಿಸುತ್ತಿದೆ. ಪ್ರತಿಯೊಬ್ಬರೂ ಗಿಡ ನೆಟ್ಟು ಪೋಷಣೆ ಮಾಡಿದರೆ ಪರಿಸರಕ್ಕೆ ತಮ್ಮದೇ ಆದ ಅಳಿಲು ಸೇವೆ ಸಲ್ಲಿಸಬಹುದು" ಎಂದರು.

ಫಕ್ಕೀರೇಶರ ಪರಿಸರಪ್ರೇಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವುರ ಶಾಲೆಯ ಶಿಕ್ಷಕವೃಂದ, "ಈ ರೀತಿಯ ವಿದ್ಯಾರ್ಥಿ ತಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡಿರುವುದು ಅದೃಷ್ಟ. ಪ್ರತಿ ಶಾಲೆಗೂ ಇಂಥ ವಿದ್ಯಾರ್ಥಿಗಳು ದೊರೆತರೆ ಪರಿಸರ ಸಮತೋಲನ ಸಾಧ್ಯವಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ಭಾನುಮತಿಗೆ ಮರಿ ಜನನ: ಬಿಡಾರದ ಆನೆಗಳ ಸಂಖ್ಯೆ 22ಕ್ಕೆ ಏರಿಕೆ

Last Updated : Nov 5, 2023, 10:26 AM IST

ABOUT THE AUTHOR

...view details