ಹಾವೇರಿ : 12ನೇ ಶತಮಾನ ಹಲವು ಶರಣರಿಂದ ಕೂಡಿದ ಕಾಲಘಟ್ಟ. ಈ ಶತಮಾನದಲ್ಲಿದ್ದ ಪ್ರಮುಖರಲ್ಲಿ ಅಂಬಿಗರ ಚೌಡಯ್ಯ ಒಬ್ಬರು. ಅಂಬಿಗ ಸಮುದಾಯಕ್ಕೆ ಸೇರಿದ ಇವರನ್ನು 'ನಿಜಶರಣ ಅಂಬಿಗರ ಚೌಡಯ್ಯ' ಎಂದೇ ಕರೆಯಲಾಗುತ್ತದೆ. ಪ್ರಮುಖ ಶಿವಶರಣ ಮತ್ತು ವಚನಕಾರರಾಗಿದ್ದ ಚೌಡಯ್ಯ ಹಲವು ಮಹತ್ವದ ವಚನಗಳನ್ನು ರಚಿಸಿದ್ದಾರೆ.
ಮೊನಚು ವಚನಗಳಿಂದ ನಿಷ್ಠರಾಗಿದ್ದ ಅಂಬಿಗರ ಚೌಡಯ್ಯ ಹಾವೇರಿ ಜಿಲ್ಲೆಯವರು. ಬಸವಣ್ಣನವರ ಅನುಭವ ಮಂಟಪದಲ್ಲಿ ಸ್ಥಾನ ಗಳಿಸಿದ್ದರು. ವೃತ್ತಿಯಲ್ಲಿ ಅಂಬಿಗರಾಗಿ ಪ್ರವೃತ್ತಿಯಲ್ಲಿ ಅನುಭವಿಯಾಗಿದ್ದ ಇವರು ಬದುಕಿನ ಕೊನೆಯ ದಿನಗಳನ್ನು ಕಳೆದಿದ್ದು ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರದಲ್ಲಿ. ಚೌಡಯ್ಯದಾನಪುರದ ತುಂಗಭದ್ರಾ ನದಿಯ ತಟದಲ್ಲೇ ಐಕ್ಯರಾಗಿದ್ದರು.
"ಇಂದು ಅಂಬಿಗರ ಚೌಡಯ್ಯ ಅವರ ಐಕ್ಯ ಮಂಟಪ ಅನಾಥವಾಗಿದೆ. ತುಂಗಭದ್ರೆ ಮೈದುಂಬಿದಾಗ ನೀರಲ್ಲಿ ಮುಳುಗುವ ಐಕ್ಯಮಂಟಪ ಉಳಿದ ದಿನಗಳಲ್ಲಿ ಭಕ್ತರ ದರ್ಶನಕ್ಕೆ ಲಭ್ಯವಾಗುತ್ತದೆ. ಈ ಮಂಟಪವನ್ನು 1968ರಲ್ಲಿ ಅಂದಿನ ಚೌಡಯ್ಯದಾನಪುರದ ಶಿವದೇವ ಒಡೆಯರು ನಿರ್ಮಿಸಿದ್ದರು. ಆದ್ರೆ, ಯಾವ ಸರ್ಕಾರವೂ ಸಹ ಇದುವರೆಗೆ ಐಕ್ಯ ಮಂಟಪದ ಅಭಿವೃದ್ಧಿಗೆ ಮುಂದಾಗಿಲ್ಲ. ಅಂದು ನಿರ್ಮಿಸಿದ ಕಲ್ಲಿನ ಮಂಟಪ ಬಿಟ್ಟರೆ ಸ್ಥಳದ ಬೇರೆ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಮಂಟಪವನ್ನು ಕೂಡಲಸಂಗಮದ ಬಸವಣ್ಣನವರ ಐಕ್ಯ ಮಂಟಪದಂತೆಯೇ ಅಭಿವೃದ್ಧಿ ಮಾಡಬೇಕು" ಎನ್ನುತ್ತಾರೆ ಸ್ಥಳೀಯರಾದ ಗೋಣೆಪ್ಪಾ ದೀಪಾವಳಿ.
ಇದನ್ನೂ ಓದಿ :ಅಂಬಿಗರ ಚೌಡಯ್ಯ ನಾಮಫಲಕ ತೆರವುಗೊಳಿಸುವಂತೆ ಆಗ್ರಹ, ದಸಂಸ ವತಿಯಿಂದ ಪ್ರತಿಭಟನೆ