ಕರ್ನಾಟಕ

karnataka

ETV Bharat / state

ಹಾವೇರಿ ಹಳೇ ಪಿಬಿ ರಸ್ತೆ ಫುಟ್​ಪಾತ್​​​ನಲ್ಲಿ ಹೂವುಗಳ ಮಾರಾಟ .. ರೈತರಿಗೆ ನಿತ್ಯ ಸಂಕಟ

ಮಾರುಕಟ್ಟೆ ಸ್ಥಳಾಂತರಿಸುವಂತೆ ಕೃಷಿ ಉತ್ಪನ ಮಾರುಕಟ್ಟೆ ಸಮಿತಿಗೆ ವರ್ತಕರೆಲ್ಲ ಸೇರಿ ಮನವಿ ಮಾಡಿದ್ದೇವೆ. ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹಲವಾರು ವರ್ಷಗಳಿಂದ ಸೆಸ್ ಭರಿಸುತ್ತಿದ್ದೇವೆ, ಪಿಬಿ ರಸ್ತೆಯಲ್ಲಿ ನಿಂತು ಹೂವಿನ ವ್ಯಾಪಾರ ನಡೆಸುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ ಎಂದು ವರ್ತಕರ ಆರೋಪಿಸುತ್ತಿದ್ದಾರೆ.

Etv Bharat
Etv Bharat

By ETV Bharat Karnataka Team

Published : Nov 24, 2023, 10:09 PM IST

Updated : Nov 24, 2023, 10:46 PM IST

ಹಾವೇರಿ ಹಳೇ ಪಿಬಿ ರಸ್ತೆ ಫುಟ್​ಪಾತ್​ದಲ್ಲಿ ಹೂವುಗಳ ಮಾರಾಟ

ಹಾವೇರಿ:ಜಿಲ್ಲೆಯಲ್ಲಿ ಪುಷ್ಪ ಕೃಷಿಗೆ ಡಿಮ್ಯಾಂಡ್ ಇದೆ. ನಿತ್ಯ ಜಿಲ್ಲಾ ಕೇಂದ್ರ ಹಾವೇರಿ ಪುಷ್ಪ ಮಾರುಕಟ್ಟೆಗೆ ವಿವಿಧ ತಾಲೂಕುಗಳಿಂದ ಹೂಗಳು ಮಾರಾಟಕ್ಕೆ ಬರುತ್ತವೆ. ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ವಿವಿಧ ಹೂಗಳನ್ನು ಹಾವೇರಿಗೆ ತಂದು ಮಾರಾಟ ಮಾಡುವರು.

ಆದರೆ, ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಪುಷ್ಪ ಮಾರುಕಟ್ಟೆಗೆ ನಿಗದಿತ ಸ್ಥಳವಿಲ್ಲ. ಸೂಕ್ತ ಮಾರುಕಟ್ಟೆ ಇಲ್ಲ. ಹಳೆ ಪಿಬಿ ರಸ್ತೆಯಲ್ಲೇ ನಿಂತು ದಿನನಿತ್ಯ ಪುಷ್ಪ ವ್ಯಾಪಾರ ನಡೆಸಬೇಕಾಗಿದೆ. ಹೌದು.. ಕಳೆದ ಹಲವು ದಶಕಗಳಿಂದ ಜಿಲ್ಲಾಸ್ಪತ್ರೆ ಮುಂದೆ ಹಾದುಹೋಗಿರುವ ಹಳೆ ಪಿಬಿ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಪುಷ್ಪ ಮಾರುಕಟ್ಟೆ ವಹಿವಾಟು ನಡೆಯುತ್ತಿದೆ. ಪುಷ್ಪ ಮಾರುಕಟ್ಟೆ ಅವೈಜ್ಞಾನಿಕತೆಯಿಂದ ಕೂಡಿದ್ದು, ರೈತರಿಗೆ ವರ್ತಕರಿಗೆ ಮತ್ತು ಖರೀದಿದಾರರಿಗೆ ಅಷ್ಟೇ ಅಲ್ಲದೆ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೂ ನಿತ್ಯ ಕಿರಿ ಕಿರಿ ಉಂಟಾಗುತ್ತಿದೆ.

ಅದರಲ್ಲಿಯೂ ಹಬ್ಬ ಹರಿದಿನಗಳಲ್ಲಿ ಪಿಬಿ ರಸ್ತೆ ತುಂಬ ಪುಷ್ಪಗಳನ್ನು ಇಟ್ಟುಕೊಂಡು ರೈತರು ನಿಲ್ಲುವ ಪರಿಸ್ಥಿತಿ ಇದೆ. ಇದರಿಂದ ಜನದಟ್ಟಣೆ ಹಚ್ಚಾಗಿ ಪಿಬಿ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಯೂ ಉಂಟಾಗಿದೆ. ಕೆಲವೊಮ್ಮೆ ಪಿಬಿ ರಸ್ತೆಯಲ್ಲಿ ಸ್ಥಳ ಸಿಗದಿದ್ದರಿಂದ ಹೂಗಳನ್ನು ತಂದ ರೈತರು ರಸ್ತೆ ದಾಟಿ ಪಕ್ಕದ ಜಿಲ್ಲಾಸ್ಪತ್ರೆ ಮುಂದೆ ಇಟ್ಟುಕೊಂಡು ಕುಳಿತುಕೊಂಡು ಮಾರಿರುವ ಘಟನೆಗಳು ಜರುಗಿವೆ.

ವಿವಿಧ ಪುಷ್ಪ ಮಾರುಕಟ್ಟೆಗೆ: ನಿತ್ಯ ಪುಷ್ಪ ಮಾರುಕಟ್ಟೆಯಲ್ಲಿ ಸೇವಂತಿ, ಚೆಂಡು, ಬಟನ್ ಗುಲಾಬಿ, ಗುಲಾಬಿ, ಮಲ್ಲಿಗೆ, ಸುಗಂಧಪುಷ್ಪ, ಮತ್ತು ಕನಕಾಂಭರಿ ಪುಷ್ಪ ಮಾರಾಟ ನಡೆಯುತ್ತದೆ. ರೈತರು ತಂದ ವಿವಿಧ ಹೂಗಳನ್ನು ವರ್ತಕರು ಖರೀದಿ ಮಾಡಿ, ಗ್ರಾಹಕರಿಗೆ ಚಿಲ್ಲರೆಯಾಗಿ ಮಾರುವರು.

ಟ್ರಾಫಿಕ್ ಸಮಸ್ಯೆ:ಹಳೇ ಪಿಬಿ ರಸ್ತೆಯಲ್ಲಿ ಪುಷ್ಪ ಮಾರಾಟದ ವೇಳೆ ಸುಮಾರು ನಾಲ್ಕೈದು ಸಂಚಾರಿ ಪೊಲೀಸರು ನಿಂತು ಟ್ರಾಫಿಕ್ ನಿಯಂತ್ರಿಸಬೇಕಾದ ಅನಿವಾರ್ಯತೆ ಇದೆ. ರಸ್ತೆ ತುಂಬಾ ಎಲ್ಲೆಂದರಲ್ಲಿ ದ್ವಿಚಕ್ರವಾಹನ ನಿಲ್ಲಿಸುವ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತೆ. ಪುಷ್ಪ ಮಾರುಕಟ್ಟೆ ಮುಂದಿನ ಭಾಗದಲ್ಲಿ ಜಿಲ್ಲಾಸ್ಪತ್ರೆ ಇದ್ದು, ಆಸ್ಪತ್ರೆಗೆ ಬರುವ ಆ್ಯಂಬುಲೆನ್ಸಗಳು ಸೇರಿದಂತೆ ವಿವಿಧ ರೋಗಿಗಳು ಬೇಗನೆ ಆಸ್ಪತ್ರೆಗೆ ತಲುಪಲು ಇಲ್ಲಿಯ ಸಂಚಾರ ದಟ್ಟಣೆಯಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ವರ್ತಕರು ಏನು ಹೇಳ್ತಾರೆ?:ಕಳೆದ ಹಲವು ವರ್ಷಗಳಿಂದ ಮಾರುಕಟ್ಟೆ ಸ್ಥಳಾಂತರಿಸುವಂತೆ ಕೃಷಿ ಉತ್ಪನ ಮಾರುಕಟ್ಟೆ ಸಮಿತಿಗೆ ವರ್ತಕರೆಲ್ಲ ಸೇರಿ ಮನವಿ ಮಾಡಿದ್ದೇವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಕಳೆದ ಹಲವು ವರ್ಷಗಳಿಂದ ನಾವು ಸೆಸ್ ಭರಿಸುತ್ತಿದ್ದೇವೆ. ಆದರೂ ಸಹ ತಮಗೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಲ್ಲ.ಈಗ ಇರುವ ಮಾರುಕಟ್ಟೆ ಫುಟ್​ ಪಾತ್‌ ಮೇಲೆ ಇದ್ದು ರೈತರಿಗೆ ಖರೀದಿದಾರರಿಗೆ ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ವರ್ತಕರು ತಿಳಿಸಿದ್ದಾರೆ.

ವ್ಯತಿರಿಕ್ತ ಅಭಿಪ್ರಾಯ:ಇನ್ನು ಕೆಲ ವರ್ತಕರು ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾವೇರಿ ಮಧ್ಯಭಾಗದಲ್ಲಿ ಮಾರುಕಟ್ಟೆ ಇದೆ. ಈಗ ಇರುವ ಮಾರುಕಟ್ಟೆಗೆ ಸರಿಯಾಗಿ ಪುಷ್ಪಗಳು ಬರುತ್ತಿಲ್ಲ. ಇನ್ನು ಬೇರೆ ಕಡೆಯಾದರೆ ನಮ್ಮ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ. ಹಾವೇರಿಯಲ್ಲಿರುವ ಪುಷ್ಪ ಮಾರುಕಟ್ಟೆ ಚಿಕ್ಕದಾಗಿದೆ. ಹಬ್ಬ ಹರಿದಿನ ರೈತರು ಹೆಚ್ಚು ಹೂವುಗಳನ್ನು ತಂದಾಗ ಸಂಚಾರ ದಟ್ಟಣೆಯಾಗುತ್ತೆ. ಅದು ಮುಂಜಾನೆ 8 ಗಂಟೆಯಿಂದ 10 ಗಂಟೆಯ ವರೆಗೆ ಮಾತ್ರ ಈ ರೀತಿಯಾಗುತ್ತೆ, ಉಳಿದ ಸಮಯದಲ್ಲಿ ಸಾಮಾನ್ಯವಾಗಿರುತ್ತೆ ಎನ್ನುತ್ತಾರೆ ಕೆಲ ವರ್ತಕರು

ನಿತ್ಯ ಸಮಸ್ಯೆ:ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿಪದೇ ಪದೆ ಪೊಲೀಸರು ಬಂದು ಹೂಗಳ ಚೀಲಗಳನ್ನು ಹಿಂದೆ ತಗೆದುಕೊಳ್ಳಿ ಎನ್ನುತ್ತಾರೆ. ರಸ್ತೆಯಲ್ಲಿ ಇನ್ನು ಹಬ್ಬ ಹರಿದಿನಗಳಲ್ಲಿ ಸಮಸ್ಯೆ ಹೇಳ ತೀರದಾಗಿದೆ. ಸಂಚಾರ ದಟ್ಟಣೆಯಿಂದ ವಾಹನಗಳು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತದೆ. ರೈತರಿಗೆ ಹತ್ತಿರದ ಸಮರ್ಪಕ ಮೂಲ ಸೌಲಭ್ಯಗಳಿರುವ ಪ್ರತ್ಯೇಕ ಮಾರುಕಟ್ಟೆ ಸ್ಥಳವನ್ನು ಎಪಿಎಂಸಿ ಅಧಿಕಾರಿಗಳು ಒದಗಿಸಬೇಕೆಂದು ವರ್ತಕ ಮಹ್ಮದ್ ಗೌಸ್ ಆಗ್ರಹಿಸಿದ್ದಾರೆ.

ಇದನ್ನೂಓದಿ:ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳ ಉದ್ಘಾಟನೆ: ಇಂದಿನಿಂದ ಮೂರು ದಿನಗಳ ರಾಷ್ಟ್ರೀಯ ಈಜು ಸ್ಪರ್ಧೆ

Last Updated : Nov 24, 2023, 10:46 PM IST

ABOUT THE AUTHOR

...view details