ಹಾವೇರಿ: ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತಕ್ಕೆ ಬಿತ್ತನೆ ಬೀಜ ನೀಡಿದ ಹಾವೇರಿ ರೈತರು ಇದೀಗ ಹೈರಾಣಾಗಿದ್ದಾರೆ. 2021ರಲ್ಲಿ ನೀಡಿದ ಬಿತ್ತನೆ ಬೀಜಕ್ಕೆ ನಿಗಮ ರೈತರಿಗೆ ಬಾಕಿ ಹಣ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ರೈತರಿಂದ ಕ್ವಿಂಟಲ್‌ಗಟ್ಟಲೆ ಅಲಸಂದೆ ಸೇರಿದಂತೆ ವಿವಿಧ ಬಿತ್ತನೆ ಬೀಜ ಪಡೆದ ನಿಗಮ ಈವರೆಗೆ ಒಂದು ಕಂತಿನ ಹಣ ನೀಡಿದ್ದು ಇನ್ನೊಂದು ಕಂತಿನ ಹಣ ನೀಡುತ್ತಿಲ್ಲ. ಇದರಿಂದ ಪ್ರತಿನಿತ್ಯ ನಿಗಮ ಕಚೇರಿಗೆ ಅಲೆದಾಡುವುದೇ ನಮ್ಮ ಕಾಯಕವಾಗಿದೆ ಎಂದು ರೈತರು ದೂರಿದ್ದಾರೆ.
ಕಳೆದ ಮೂರೂವರೆ ತಿಂಗಳಿಂದ ಪ್ರತಿನಿತ್ಯ ನಿಗಮದ ಕಚೇರಿಗೆ ಅಲೆದಾಡುತ್ತಿದ್ದೇವೆ. ಪ್ರತಿದಿನ ನಾಳೆ ನಾಳೆ ಸಿಗುತ್ತದೆ, ನಾಡಿದ್ದು ಸಿಗುತ್ತದೆ ಎಂದು ಇಲ್ಲಿನ ಅಧಿಕಾರಿಗಳು ಉತ್ತರ ನೀಡಿ ಕಳುಹಿಸುತ್ತಿದ್ದಾರೆ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದರು.
ಬಿತ್ತನೆ ಬೀಜದ ಹಣ ಪಾವತಿಸದ ನಿಗಮ: ಹಾವೇರಿ ರೈತರ ಅಳಲು ವಿಚಿತ್ರವೆಂದರೆ, ರೈತರಿಂದ ಬಿತ್ತನೆ ಬೀಜ ಪಡೆದ ನ್ಯಾಷನಲ್ ಸೀಡ್ಸ್ ಕಾರ್ಪೋರೇಷನ್ ಸಂಪೂರ್ಣ ಹಣ ನೀಡಿದೆ ಎನ್ನಲಾಗಿದೆ. ರೈತರ ಪಾಸ್ ಬುಕ್‌ನಲ್ಲಿ ಹಣ ಬಂದಿರುವ ದಾಖಲೆಯೂ ಇದೆ. ಆದರೆ ಖಾತೆಗೆ ಸಂಬಂಧಿಸಿದ ಸಮಸ್ಯೆ ಇದ್ದು ರಾಜ್ಯ ಬಿತ್ತನೆ ಬೀಜ ನಿಗಮದಿಂದ ಹಣ ಬರುತ್ತಿಲ್ಲ ಎಂದು ಅಧಿಕಾರಿಗಳು ದಿನನಿತ್ಯ ಹೇಳಿ ಕಳುಹಿಸುತ್ತಿದ್ದಾರೆ. ಹಾವೇರಿಯಲ್ಲಿರುವ ರಾಜ್ಯ ಬೀಜ ನಿಗಮ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ರೈತರು ಹೇಳಿದ್ದಾರೆ.
14 ಕೋಟಿ ರೂ. ಬಾಕಿ:ಜಿಲ್ಲೆಯಲ್ಲಿ ರೈತರಿಂದ ನಿಗಮ 14 ಕೋಟಿ ರೂ. ಬಿತ್ತನೆ ಬೀಜ ಖರೀದಿ ಮಾಡಿದೆ. ನಿಗಮದಿಂದ 14 ಕೋಟಿ ರೂ. ಬಾಕಿ ಬರುವುದು ಇದೆ. ಅಲಸಂದೆ ಬೆಳೆದ ರೈತರಷ್ಟೇ ಅಲ್ಲ, ಇತರ ಬೆಳೆಯ ಬಿತ್ತನೆ ಬೀಜ ನೀಡಿದ ರೈತರದ್ದೂ ಇದೇ ಸ್ಥಿತಿ. ಮೊದಲೇ ಅಧಿಕ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ ಸತತ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇಲ್ಲಿಂದ ಹಣ ಪಡೆದು ಹಿಂಗಾರು ಬಿತ್ತನೆ ಮಾಡೋಣವೆಂದರೆ ನಿಗಮದ ಅಧಿಕಾರಿಗಳು ಹಣ ನೀಡುತ್ತಿಲ್ಲ. ಇಷ್ಟು ಸಾಲದೆಂಬಂತೆ ಇದೀಗ ಜಾನುವಾರುಗಳಿಗೆ ವ್ಯಾಪಕವಾಗಿ ಗಂಟುರೋಗ ಕಾಣಿಸಿಕೊಂಡಿದ್ದು ನಾವು ಎಲ್ಲಿಂದ ಹಣ ತರಬೇಕು ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ:ಕಬ್ಬಿನ ಬಾಕಿ ಹಣ ನೀಡುವಂತೆ ಆಗ್ರಹ: ಸಕ್ಕರೆ ಸಾಗಿಸುತ್ತಿದ್ದ ಲಾರಿ ತಡೆದು ರೈತರ ಪ್ರತಿಭಟನೆ