ಹಾವೇರಿ: ಹಾವೇರಿ ಸಮೀಪದ ಆಲದಕಟ್ಟಿಯ ರೈತ ಬಸವಂತಪ್ಪ ಅಂಗಡಿ ಅವರು ಭರಪೂರ ಮಾವು ಬೆಳೆದಿದ್ದಾರೆ. ಇವರು ಕೇವಲ ಒಂದು ಎಕರೆ ಭೂಪ್ರದೇಶದಲ್ಲಿ 35 ಮಾವಿನ ಮರಗಳಲ್ಲಿ 6 ಟನ್‌ಗೂ ಅಧಿಕ ಮಾವು ಬೆಳೆದಿರೋದು ವಿಶೇಷವಾಗಿದೆ.
ಹಾವೇರಿ ಸಮೀಪದ ಆಲದಕಟ್ಟಿ ಗ್ರಾಮದ ಪ್ರಗತಿಪರ ರೈತರಲ್ಲಿ ಬಸವಂತೆಪ್ಪ ಅಂಗಡಿ ಕೂಡಾ ಒಬ್ಬರು. ಒಂದು ಎಕರೆ ಜಮೀನಿನಲ್ಲಿ ಬಸವಂತಪ್ಪ 35 ಮಾವಿನಮರ ಬೆಳೆಸಿದ್ದಾರೆ. ಈ ವರ್ಷ ಇವರ ಮಾವಿನ ತೋಟ ಭರಪೂರವಾಗಿ ಫಲ ಹೊತ್ತು ನಿಂತಿದೆ. ವಿಚಿತ್ರ ಅಂದರೆ ಮಾವಿನ ಕಾಯಿಗಳ ಭಾರ ತಾಳಲಾರದೆ ಮರಗಳು ಮುರಿಯಲಾರಂಭಿಸಿವೆ. ಈ ರೀತಿ ಮರ ಮುರಿಯದಂತೆ ಮರಗಳಿಗೆ ಆಸರೆ ನೀಡುವುದೇ ಇವರ ಕೆಲಸವಾಗಿದೆ.
'ಮಾವು ನೆಟ್ಟು 20 ವರ್ಷವಾಯಿತು. ಈ ರೀತಿಯ ಇಳುವರಿ ನೋಡಿಯೇ ಇರಲಿಲ್ಲ. 35 ಮರಗಳಲ್ಲಿ ಸುಮಾರು 6 ಟನ್ ಮಾವು ಬರುವ ಸಾಧ್ಯತೆ ಇದೆ. ಕೋವಿಡ್ ಮತ್ತು ಕಠಿಣ ಕ್ರಮಗಳಿರುವ ಕಾರಣ ಸೂಕ್ತ ಬೆಲೆ ಸಿಗುತ್ತೋ ಇಲ್ಲವೋ' ಎಂಬ ಆತಂಕ ವ್ಯಕ್ತಪಡಿಸುತ್ತಾರೆ ಬಸವಂತೆಪ್ಪ.
ಪ್ರಸ್ತುತ ವರ್ಷ ಬಸವಂತೆಪ್ಪ ಅಂಗಡಿಯ ಜಮೀನಿನಲ್ಲಿ ಭರಪೂರ ಮಾವು ಬರಲು ಕಾರಣ ಅವರ ವೈಜ್ಞಾನಿಕ ಬೇಸಾಯ ಅಂತಾರೆ ಕೃಷಿ ತಜ್ಞರು. ಪ್ರತಿ ಸಲ ಮಾವು ಹೂ ಬಿಟ್ಟಾಗ ರೈತರು ಮರಗಳಿಗೆ ನೀರು ಅಹಾರ ನೀಡುತ್ತಾರೆ. ಆದರೆ ಈ ರೀತಿ ನೀಡುವುದರಿಂದ ಹೂ ಬಿಡುವ ಮಾವಿನಗಿಡ ಟೊಂಗೆಯಾಗಿ ಪರಿವರ್ತನೆಯಾಗುತ್ತದೆ. ಈ ಸಂದರ್ಭದಲ್ಲಿ ಮಾವಿನಮರಕ್ಕೆ ಬಿಸಿಯಾಗುವಂತಹ ಗಂಧಕಾಮ್ಲ ಸೇರಿದಂತೆ ವಿವಿಧ ಸಾವಯುವ ಗೊಬ್ಬರ ನೀಡಿದ್ದೇ ಆದರೆ ಮಾವಿನ ಫಸಲು ಅಧಿಕ ಪ್ರಮಾಣದಲ್ಲಿ ಬರುತ್ತದೆ ಅನ್ನೋದು ಕೃಷಿ ತಜ್ಞರ ಅಭಿಪ್ರಾಯ.
ಇದನ್ನೂ ಓದಿ:ರೈತರ ಪಾಲಿಗೆ ಕಾಮಧೇನುವಾದ ತೆಂಗಿನ ಮರ: ಕಲ್ಪರಸ ಮಾರುಕಟ್ಟೆಗೆ ಸಿದ್ಧತೆ