1 ಎಕರೆಯಲ್ಲಿ 4 ಟನ್ಗೂ ಅಧಿಕ ಮಾವು ಬೆಳದ ಹಾವೇರಿ ರೈತ ಹಾವೇರಿ: ಯಾವುದೇ ರಸಾಯನಿಕ ಗೊಬ್ಬರ ಬಳಸದೇ ಕೇವಲ ಸಾವಯವ ಕೃಷಿ ಪದ್ದತಿಯನ್ನು ಬಳಸಿಕೊಂಡು ಒಂದು ಎಕರೆ ತೋಟದಲ್ಲಿ ಸುಮಾರು 4.5 ಟನ್ ಮಾವು ಬೆಳೆ ನಿರೀಕ್ಷೆಯಲ್ಲಿದ್ದಾರೆ ಹಾವೇರಿಯ ರೈತ. ತಾಲೂಕಿನ ಆಲದಕಟ್ಟಿ ಗ್ರಾಮದ ಬಸವಂತಪ್ಪ ಅಗಡಿ ಎಂಬವರ ಮಾವಿನ ತೋಟದಲ್ಲಿ ಮಾವು ಸಮೃದ್ಧವಾಗಿ ಫಸಲು ಬಿಟ್ಟಿದ್ದು, ಕಾಯಿಗಳ ಭಾರಕ್ಕೆ ಗಿಡದ ಟೊಂಗೆಗಳು ನೆಲಕ್ಕೆ ಬಾಗಿವೆ.
ರೈತ ಬಸವಂತಪ್ಪ ಅಗಡಿ ಮಾತನಾಡಿ, "ಕಳೆದ ನಾಲ್ಕು ವರ್ಷಗಳಿಂದ ಸಾವಯುವ ಕೃಷಿ ಪದ್ದತಿಯನ್ನು ಅವಲಂಬಿಸಿಕೊಂಡಿದ್ದೇನೆ. ಪರಿಣಾಮ ವರ್ಷದಿಂದ ಇಳುವರಿ ಅಧಿಕವಾಗುತ್ತಿದೆ. ಮಾವು ಹೂ ಬಿಟ್ಟಾಗ ಸಮರ್ಪಕವಾದ ನಿರ್ವಹಣೆ ಮಾಡಬೇಕು. ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಬಳಸಬಾರದು. ಮಾವು ಹೂ ಬಿಡಲಾರಂಭಿಸಿದಾಗ ಹೆಚ್ಚಿನ ಆಸಕ್ತಿ ವಹಿಸಬೇಕು. ಹೂವುಗಳಿಗೆ ಶೀಲಿಂಧ್ರದ ರೋಗ ಬರದಂತೆ ನೋಡಿಕೊಳ್ಳಬೇಕು" ಎಂದು ಹೇಳಿದರು.
ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು:ಮುಂದುವರೆದು ಮಾತನಾಡಿ, "ಮಣ್ಣಿನಲ್ಲಿ ಉತ್ತಮವಾದ ಫಲವತ್ತತೆ ಕಾಪಾಡಿಕೊಂಡು ಸರಿಯಾದ ಉಪಚಾರ ಮಾಡಿದಾಗ ಯಾವುದೇ ಫಸಲು ಅಧಿಕವಾಗಿ ಪಡೆಯಬಹುದು. ಸುಮ್ಮನೆ ಅಧಿಕ ರಸಾಯನಿಕ ಬಳಸಿ ನಷ್ಟ ಅನುಭವಿಸಬಾರದು. ಬದಲಿಗೆ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರತಿ ಹಂತದಲ್ಲಿ ಕೃಷಿ ಕಡೆ ಆಸಕ್ತಿ ನೀಡಬೇಕು. ಸತತ ಪ್ರಯತ್ನ ಮಾಡಬೇಕು. ಬೀಜ ಹಾಕುವುದರಿಂದ ಹಿಡಿದು ಫಸಲು ಬರುವವರೆಗೆ ಆಸಕ್ತಿ ಇರಬೇಕು. ಆಗ ಮಾತ್ರ ಉತ್ತಮ ಫಸಲು ಬರುತ್ತದೆ" ಎಂದರು.
ಬಸವಂತಪ್ಪಾ ಅವರ ತೋಟಕ್ಕೆ ಕೃಷಿ ಅಧಿಕಾರಿಗಳು ಹಾಗೂ ಗ್ರಾಮದ ಇತರ ರೈತರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಹಾವೇರಿ ಜಿಲ್ಲೆಯ ಕೃಷಿ ಸಹ ನಿರ್ದೇಶಕ ಮಂಜುನಾಥ್ ತಮ್ಮ ಸಿಬ್ಬಂದಿ ಜೊತೆ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ನಂತರ ಮಾತನಾಡಿ, "ಮಾವನ್ನು ನಾವು ಪರ್ಯಾಯ ಸಸ್ಯ ಎನ್ನುತ್ತೇವೆ. ಮಾವು ಒಂದು ವರ್ಷ ಅಧಿಕ ಬಂದರೆ, ಇನ್ನೊಂದು ವರ್ಷ ಫಸಲು ಕಡಿಮೆ ಬರುತ್ತದೆ. ಆದರೆ, ಬಸವಂತಪ್ಪ ಕಳೆದ ನಾಲ್ಕು ವರ್ಷಗಳಿಂದ ಅಧಿಕ ಫಸಲು ಪಡೆಯುವುದನ್ನು ನೋಡಿದರೆ ಆಚ್ಚರಿಯಾಗುತ್ತದೆ. ಅವರಿಗೆ ನಾವು ಸಲಹೆ ನೀಡುವ ಬದಲು ಅವರಿಂದಲೇ ಫಸಲಿನ ಸಲಹೆಗಳನ್ನು ಪಡೆಯುವಷ್ಟು ಇಳುವರಿ ಉತ್ತಮವಾಗಿದೆ ಎಂದರು.
"ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಕೊಟ್ಟಿಗೆ ಗೊಬ್ಬರ ಬಳಸಿಕೊಂಡಿದ್ದಾರೆ. ಇದರಿಂದ ಮಣ್ಣಿನ ಜೀವಂತಿಕೆ ಬರುತ್ತದೆ. ಮಣ್ಣಿನ ಫಲವತ್ತತೆ ಬಂದರೆ ಹೆಚ್ಚು ಹೂವು ಬಿಡುತ್ತದೆ. ಶೇ.80 ರಷ್ಟು ಸಾವಯವ ಪದ್ದತಿ ಮತ್ತು ಇನ್ನುಳಿದ ಶೇ.20 ರಷ್ಟು ರಸಾಯನಿಕ ಬಳಸುವ ಮೂಲಕ ಅಧಿಕ ಇಳುವರಿ ಪಡೆಯುತ್ತಿದ್ದಾರೆ" ಎಂದು ಕೃಷಿ ಸಹ ನಿರ್ದೇಶಕ ಮಂಜುನಾಥ್ ತಿಳಿಸಿದರು. ಹಾವೇರಿ ತಾಲೂಕಿನ ಸುತ್ತಮುತ್ತಲ ಪ್ರದೇಶದಲ್ಲಿ ಬಸವಂತಪ್ಪ ಅವರ ತೋಟವು ರೈತರ ಆಕರ್ಷಣೀಯ ಕೇಂದ್ರವಾಗಿದ್ದು, ತೋಟಕ್ಕೆ ಭೇಟಿ ಅಧಿಕ ಇಳುವರಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಕಸದ ತೊಟ್ಟಿಯಂತಾಗಿದ್ದ ಕಬ್ಬೂರು ಕೆರೆ.. ಗ್ರಾಮಸ್ಥರು, ನರೇಗಾದಿಂದ ಬಂತು ಜೀವಕಳೆ