ಹಾವೇರಿ:ರಾಜ್ಯದಲ್ಲಿ ರೈತರನ್ನು ಮದುವೆಯಾಗಲು ವಧುವೇ ಸಿಗುತ್ತಿಲ್ಲ ಎಂಬ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೃಷಿಕರಾಗಿರುವ ಕಾರಣ ನಮಗೆ ಹೆಣ್ಣು ಕೊಡ್ತಿಲ್ಲ ಎಂದು ಅವಿವಾಹಿತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಚರ್ಚೆ ಚುನಾವಣೆ ಸಮಯದಲ್ಲೂ ಜೋರಾಗಿಯೇ ನಡೆದಿತ್ತು. ಈ ನಡುವೆ ಕನ್ಯೆ ಸಿಗದಿದ್ದಕ್ಕೆ ಮನನೊಂದು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಜುನಾಥ ನಾಗನೂರು ಆತ್ಮಹತ್ಯೆಗೆ ಶರಣಾದ ರೈತ.
ಇದನ್ನೂ ಓದಿ:ವಯಸ್ಸು ಐವತ್ತಾದರೂ ಸಿಗದ ಕನ್ಯೆ... ಮದುವೆ ಮಾಡಿಸಿ ಎಂದು ಗ್ರಾ. ಪಂ. ಮೊರೆ ಹೋದ ವರ!
ಮಂಜುನಾಥನಿ ಅವರಿಗೆ ಕಳೆದ ಏಳೆಂಟು ವರ್ಷಗಳಿಂದ ಕನ್ಯೆ ಹುಡುಕುತ್ತಿದ್ದರಂತೆ. ಆದರೆ, ಯಾರೊಬ್ಬರೂ ಮದುವೆಗೆ ಕನ್ಯೆ ಕೊಟ್ಟಿರಲಿಲ್ಲ. ನನ್ನಿಂದ ತಂದೆ ತಾಯಿಗೆ ತೊಂದರೆ ಎಂದು ಜೀವನದಲ್ಲಿ ಜಿಗುಪ್ಸೆಗೊಂಡು ಮಂಜುನಾಥ್ ಆತ್ಮಹತ್ಯೆ ಶರಣಾಗಿದ್ದಾರೆ ಎನ್ನಲಾಗಿದೆ. ಜೂ. 15ರಂದು ಜಮೀನಿನಲ್ಲಿ ವಿಷ ಸೇವಿಸಿದ್ದರು. ಸುದ್ದಿ ತಿಳಿದು ತಕ್ಷಣ ಪೋಷಕರು ಹಾಗೂ ಗ್ರಾಮಸ್ಥರು ಬ್ಯಾಡಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಿಮ್ಸ್ಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಜೂ. 21ರಂದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ನಮ್ಮೂರಿನ ಹುಡುಗರಿಗೆ ಮದುವೆ ಆಗುವಂತೆ ಮಾಡಿ ಪುಣ್ಯ ಕಟ್ಟಿಕೊಳ್ಳಿ.. ಡಿಸಿ, ಶಾಸಕರಿಗೆ ಊರನ ಜನರ ಮನವಿ..