ಹಾವೇರಿ: ಗಣೇಶ ಚತುರ್ಥಿ ಬಂದರೆ ಸಾಕು ಎಲ್ಲೆಡೆ ಸಂಭ್ರಮವೂ ಸಂಭ್ರಮ. ಹಾವೇರಿ ತಾಲೂಕು ಗುತ್ತಲ ಪಟ್ಟಣದ ನೆಗಳೂರುಮಠ ಮನೆಯಲ್ಲಂತೂ ಸಂಭ್ರಮ ಇಮ್ಮಡಿಯಾಗುತ್ತದೆ. ಇದಕ್ಕೆ ಕಾರಣ ಗಣೇಶ ಚತುರ್ಥಿ ದಿನ ಹತ್ತೀರವಾಗುತ್ತಿದ್ದಂತೆ ಈ ಕುಟುಂಬದ 15 ಕ್ಕೂ ಅಧಿಕ ಸದಸ್ಯರು ಒಟ್ಟಿಗೆ ಸೇರುವುದು.
ವಿವಿಧ ಇಲಾಖೆಗಳಲ್ಲಿ ಸರ್ಕಾರಿ ನೌಕರಿ ಮಾಡುವ ನೆಗಳೂರುಮಠ ಕುಟುಂಬದ ಸದಸ್ಯರು ಗಣೇಶನ ಹಬ್ಬಕ್ಕೆ ಒಟ್ಟಾಗಿ ಸೇರುತ್ತಾರೆ. ಗಣೇಶ ಮೂರ್ತಿ ತಯಾರಿಸುವ ಈ ಕುಟುಂಬದ ಸದಸ್ಯರು ಹಬ್ಬ ಸಮೀಪಿಸುತ್ತಿದ್ದಂತೆ ಗಣೇಶ ಮೂರ್ತಿ ತಯಾರಿಕೆಯಿಂದ ಬಣ್ಣ ಹಚ್ಚುವುದರಲ್ಲಿ ಪಾಲ್ಗೊಳ್ಳುತ್ತಾರೆ. ಕುಟುಂಬದ ಹಿರಿಯ ಸದಸ್ಯರಿಂದ ಹಿಡಿದು ಐದು ವರ್ಷದ ಮಗುವಿನವರೆಗೆ ಎಲ್ಲರೂ ಗಣೇಶ ಮೂರ್ತಿ ತಯಾರಿಸುತ್ತಾರೆ. ಈ ಕುಟುಂಬಕ್ಕೆ ಗಣೇಶ ಮೂರ್ತಿ ತಯಾರಿಕೆಯ ಒಂದು ಶತಮಾನದ ನಂಟಿದೆ.
ಪ್ರಸ್ತುತ ಕುಟುಂಬದ ಹಿರಿಯ ಸದಸ್ಯರಾಗಿರುವ ಶಿವಕುಮಾರಯ್ಯ ಅವರ ತಂದೆಯಿಂದ ಗಣೇಶ ಮೂರ್ತಿ ತಯಾರಿಸುವ ಕಲೆ ಈ ಕುಟುಂಬದ ಸದಸ್ಯರಿಗೆ ಬಳುವಳಿಯಾಗಿ ಬಂದಿದೆ. ಗೃಹ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಸೇರಿರುವ ಈ ಕುಟುಂಬದ ಸದಸ್ಯರು ಗಣೇಶ ಹಬ್ಬಕ್ಕೆ ಎಂಟರಿಂದ 15 ದಿನ ರಜೆ ಹಾಕಿ ಬರುತ್ತಾರೆ.
ಅಲ್ಲದೆ ನೆಗಳೂರುಮಠ ಮನೆತನಕ್ಕೆ ಸೇರಿದ ಸೊಸೆಯಂದಿರು, ಅಳಿಯಂದಿರು ಸಹ ಬಂದು ಈ ದಿನಗಳಲ್ಲಿ ಗಣೇಶ ಮೂರ್ತಿ ತಯಾರಿಕೆಯಲ್ಲಿ ಮಗ್ನರಾಗುತ್ತಾರೆ. ಮನೆಯಿಂದ ಮದುವೆಯಾದ ಹೆಣ್ಣುಮಕ್ಕಳು ಸಹ ಗಣೇಶನ ಹಬ್ಬಕ್ಕೆ ತವರು ಮನೆಗೆ ಬರುತ್ತಾರೆ. ಅವರು ಸಹ ಗಣೇಶ ಮೂರ್ತಿ ತಯಾರಿಕೆಯಲ್ಲಿ ಪಾಲ್ಗೊಳ್ಳುತ್ತಾರೆ.