ಹಾವೇರಿ : ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶ ತೃಪ್ತಿಕರವಾಗಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸ್ಥಾನವನ್ನ ಗಣನೀಯವಾಗಿ ಹೆಚ್ಚಿಸಲು ಜಿಲ್ಲಾ ಶಿಕ್ಷಣ ಇಲಾಖೆ ಮುಂದಾಗಿದೆ.
ಇಲಾಖೆಯೇ ಈಗ ವರದಾ ವಾಹಿನಿ ಎಂಬ ಯುಟ್ಯೂಬ್ ಚಾನಲ್ ತೆರೆದಿದೆ. ಇಲ್ಲಿ ನುರಿತ ಶಿಕ್ಷಕರು ಎಸ್ಎಸ್ಎಲ್ಸಿ ಪಠ್ಯಕ್ರಮವನ್ನ ಸರಳವಾಗಿ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದಾರೆ. ವಿಷಯಕ್ಕನುಗುಣವಾಗಿ ತರಗತಿಗಳನ್ನು ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ತಮಗೆ ಬಿಡುವು ಸಿಕ್ಕಾಗಲೆಲ್ಲ ಪಾಠಗಳನ್ನ ತಿಳಿಯಬಹುದು. ಈ ಚಾನಲ್ನ್ನು ಶಿಕ್ಷಕರು ತಾವೇ ಸ್ವಂತವಾಗಿ ನಿರ್ಮಿಸಿದ್ದು, ಇನ್ನಷ್ಟು ಸುಧಾರಣೆ ತರಲು ಶಿಕ್ಷಣ ಇಲಾಖೆ ಶ್ರಮಿಸುತ್ತಿದೆ.
ಜಿಲ್ಲೆಯಾಗಿ 22 ವರ್ಷಗಳು ಕಳೆದರು ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹೇಳಿಕೊಳ್ಳುವಂತಹ ಸ್ಥಾನ ಗಳಿಸಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಇಂತಹ ಕಾರ್ಯಕ್ರಮಗಳಲ್ಲಿ ಯುಟ್ಯೂಬ್ ಚಾನಲ್ ಕೂಡಾ ಒಂದು. ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗಾಗಿ ವರದಾ ವಾಹಿತಿ ಎಂಬ ಯುಟ್ಯೂಬ್ ಚಾನಲ್ ಆರಂಭಿಸಿದೆ. ಇಲ್ಲಿ ನುರಿತ ಶಿಕ್ಷಕರು ಪ್ರಾತ್ಯಕ್ಷತೆಯೊಂದಿಗೆ ಪಾಠಗಳನ್ನು ಮಾಡುತ್ತಾರೆ. ಶಿಕ್ಷಕರು ಮಾಡಿರುವ ಪಾಠಗಳನ್ನು ಎಡಿಟ್ ಮಾಡಲಾಗುತ್ತದೆ. ಅದಕ್ಕೆ ತಕ್ಕಂತೆ ವಿಶ್ಯುವಲ್ ಸಂಯೋಜನೆ ಮಾಡಲಾಗುತ್ತದೆ. ನಂತರ ನುರಿತ ಶಿಕ್ಷಕರು ಪಾಠ ಪ್ರಸಾರಕ್ಕೆ ಅನುಮತಿ ನೀಡಿದ ನಂತರ ಯುಟ್ಯೂಬ್‌ನಲ್ಲಿ ಹಾಕಲಾಗುತ್ತದೆ.