ಹಾವೇರಿ: ಜಿಲ್ಲೆಯಲ್ಲಿ 505 ನಕಲಿ ಫಲಾನುಭವಿಗಳು ಸರ್ಕಾರಕ್ಕೆ ವಂಚನೆ ಮಾಡಿ, ನೆರೆ ಪರಿಹಾರದ ಹಣ ಪಡೆದಿರುವುದು ಬೆಳಕಿಗೆ ಬಂದಿದೆ.
ನಕಲಿ ಫಲಾನುಭವಿಗಳಿಂದ ಹಣ ವಾಪಸ್ ಪಡೆಯಲು ಮುಂದಾದ ಹಾವೇರಿ ಜಿಲ್ಲಾಡಳಿತ! 2019ರಲ್ಲಿ ಜಿಲ್ಲೆಯ ವರದಾ, ಧರ್ಮಾ, ಕುಮದ್ವತಿ ಮತ್ತು ತುಂಗಭದ್ರಾ ನದಿಗಳು ಉಕ್ಕಿ ಹರಿದ ಪರಿಣಾಮ ಸಾವಿರಾರು ಮನೆಗಳು ಧರೆಗುರುಳಿದ್ದವು. ಸರ್ಕಾರ ಮನೆ ಕಳೆದುಕೊಂಡವರಿಗೆ 50 ಸಾವಿರದಿಂದ 5 ಲಕ್ಷ ರೂ.ವರೆಗೆ ಪರಿಹಾರ ವಿತರಿಸಿತ್ತು. ಈ ರೀತಿ ಪರಿಹಾರ ಪಡೆದವರಲ್ಲಿ 505 ನಕಲಿ ಫಲಾನುಭವಿಗಳಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಹಾವೇರಿ ತಾಲೂಕು ಒಂದರಲ್ಲೇ 294 ನಕಲಿ ಫಲಾನುಭವಿಗಳು ಹಣ ಪಡೆದಿದ್ದು, ಅವರ ಖಾತೆಗೆ ಹಾಕಲಾಗಿದ್ದ ಮೂರು ಕೋಟಿಗೊ ಅಧಿಕ ಹಣ ವಾಪಸ್ ಪಡೆಯಲು ಜಿಲ್ಲಾಡಳಿತ ಮುಂದಾಗಿದೆ. ಸರ್ಕಾರದ ಈ ನಿರ್ಧಾರವನ್ನ ಜಿಲ್ಲೆಯ ಜನ ಸ್ವಾಗತಿಸಿದ್ದಾರೆ.
ಈಗಾಗಲೇ ಹಲವು ಜನರು ಸರ್ಕಾರಕ್ಕೆ ವಂಚನೆ ಮಾಡಿ, ಪರಿಹಾರ ಪಡೆದಿದ್ದಾರೆ. ಇತ್ತ, ನಿಜವಾಗಿಯೂ ಮನೆ ಕಳೆದುಕೊಂಡವರಿಗೆ ಪರಿಹಾರ ಸಿಗದೇ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಜಿಲ್ಲಾಡಳಿತ ನಕಲಿ ಫಲಾನುಭವಿಗಳಿಂದ ಹಣ ವಾಪಸ್ ಪಡೆದು ನೈಜ ಫಲಾನುಭವಿಗಳಿಗೆ ಪರಿಹಾರ ವಿತರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಓದಿ:ಹೃದಯಾಘಾತದಿಂದ ಒದ್ದಾಡುತ್ತಿದ್ದ ವ್ಯಕ್ತಿಯನ್ನು ತಮ್ಮ ಕಾರಲ್ಲೇ ಆಸ್ಪತ್ರೆಗೆ ಕರೆದೊಯ್ದ ಸಾ.ರಾ.ಮಹೇಶ್
ನೆರೆ ಪರಿಹಾರ ವಿತರಣೆಯಲ್ಲಿ ವಂಚನೆ ಮಾಡಿದ್ದ ಏಳು ಅಧಿಕಾರಿಗಳ ಮೇಲೆ ಹಾವೇರಿ ಜಿಲ್ಲಾಡಳಿತ ಈಗಾಗಲೇ ಕ್ರಮ ಕೈಗೊಂಡಿದೆ. ಇದರ ಮುಂದಿನ ಭಾಗವಾಗಿ ಈಗ ನಕಲಿ ಫಲಾನುಭವಿಗಳಿಂದ ಹಣ ವಾಪಸ್ ಪಡೆಯಲಾಗುತ್ತಿದೆ.