ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕ ಹಾವೇರಿ: ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಐತಿಹಾಸಿಕ ಮಾಲತೇಶ ದೇವಸ್ಥಾನದ ಕಾರ್ಣಿಕ ಇಂದು ನಡೆಯಿತು. 15 ಅಡಿ ಬಿಲ್ಲನೇರಿದ ಗೊರವಪ್ಪಜ್ಜ ನಾಗಪ್ಪ ದುರುಗಪ್ಪ ಉರ್ಮಿ ಪ್ರಸ್ತುತ ವರ್ಷದ ಕಾರ್ಣಿಕ ನುಡಿದರು. "ಮುಕ್ಕೋಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್"ಎಂದು ನುಡಿದ ನಾಗಪ್ಪಜ್ಜ ಕೆಳಗೆ ಧುಮುಕುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಹಸ್ರಾರು ಭಕ್ತರ ಜಯಘೋಷ ಮುಗಿಲು ಮುಟ್ಟಿತು.
ದೇವರಗುಡ್ಡದ ಮಾಲತೇಶ ದೇವಸ್ಥಾನ ಸುಮಾರು ವರ್ಷಗಳ ಇತಿಹಾಸ ಹೊಂದಿದೆ. ದಸರಾ ಹಬ್ಬದ ಸಮಯದಲ್ಲಿ ದೇವರಗುಡ್ಡದ ಕರಿಯಾಲ ಪ್ರದೇಶದಲ್ಲಿ ನಡೆಯುವ ದೇವರ ಕಾರ್ಣಿಕ ಕೇಳಲು ಜನರ ದಂಡೇ ನೆರೆದಿರುತ್ತದೆ. ಸುಮಾರು 9 ದಿನಗಳ ಕಾಲ ಕಠಿಣ ಉಪವಾಸ ವ್ರತಾಚರಿಸಿ ಗೊರವಪ್ಪ ನಾಗಪ್ಪ ಉರ್ಮಿ ಕಾರ್ಣಿಕ ನುಡಿಯುತ್ತಾರೆ. ಕರಿಯಾಲ ಪ್ರದೇಶಕ್ಕೆ ಡಮರುಗ, ಚಾಟಿ ಏಟಿನ ಸದ್ದಿನ ಮೂಲಕ ಗೊರವಪ್ಪಗಳು ಕಾರ್ಣಿಕದ ಗೊರವಪ್ಪನನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರುವುದು ಇಲ್ಲಿನ ವಿಶೇಷತೆ.
ಸಂಜೆಯಾಗುತ್ತಿದ್ದಂತೆ ಕಾರ್ಣಿಕ ಸ್ಥಳಕ್ಕೆ ಬರುವ ಗೊರವಯ್ಯ 15 ಅಡಿ ಎತ್ತರದ ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೇ ನೆರೆದಿದ್ದ ಸಾವಿರಾರು ಜನರು ಮೌನಕ್ಕೆ ಜಾರುತ್ತಾರೆ. ಆಗ ಗೊರವಪ್ಪ ನಾಗಪ್ಪ ಉರ್ಮಿ ವರ್ಷದ ಭವಿಷ್ಯವಾಣಿ ನುಡಿದು ಬಿಲ್ಲಿನಿಂದ ಕೆಳಗಿಳಿಯುತ್ತಾರೆ. ಈ ವರ್ಷ ಬಿಲ್ಲನ್ನೇರಿದ ಗೊರವಪ್ಪ ನಾಗಪ್ಪ ಉರ್ಮಿ "ಮುಕ್ಕೋಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್" ಎಂದು ನುಡಿದರು. ನಂತರ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಕಾರ್ಣಿಕ ವಾಣಿಯ ವಿಶ್ಲೇಷಣೆ ಮಾಡಿದರು.
"ಮುಕ್ಕೋಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್" ಎಂದರೇನು?: ಈ ವರ್ಷ ಮುಕ್ಕೋಟಿ ಜನ ಅನ್ನದಾತರು ಸಾವಿರಾರು ರುಪಾಯಿ ಖರ್ಚು ಮಾಡಿದರೂ ಬೆಳೆಗಳು ಬರಲಿಲ್ಲ. ಮಳೆರಾಯನ ಅವಕೃಪೆಯಿಂದ ಬರಗಾಲ ಬಂದಿದೆ. ಮಳೆ ಇಲ್ಲದೆ ಅನ್ನದಾತರು ಕೈ ಸುಟ್ಟುಕೊಂಡಿದ್ದಾರೆ. ಮುಕ್ಕೋಟಿ ಚಲ್ಲಿತಲೇ ಅಂದರೆ ರೈತ ವರ್ಗದವರು ಕೋಟ್ಯಂತರ ರೂಪಾಯಿ ಭೂಮಿಗೆ ಹಾಕ್ತಾರೆ, ಅದರಿಂದ ರೈತರಿಗೆ ಲಾಭವಾಗುವ ನಿರೀಕ್ಷೆಗಳು ಕಡಿಮೆ ಎಂದು ಅರ್ಚಕರು ಕಾರ್ಣಿಕವನ್ನು ವಿಶ್ಲೇಷಿಸಿದರು.
ಇದನ್ನೂ ಓದಿ:ನಾಳೆ ದಸರಾ ಜಂಬೂ ಸವಾರಿ ವೈಭವ: ಸಕಲ ಸಿದ್ಧತೆ, ಬಿಗಿ ಪೊಲೀಸ್ ಭದ್ರತೆ