ಹಾವೆರಿ:ಮಳೆಗಾಲ ಆರಂಭವಾದರೆ ಸಾಕು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಳಸೂರು ಸೇರಿದಂತೆ 25 ಗ್ರಾಮಗಳ ಜನರಲ್ಲಿ ಆತಂಕ ಮನೆಮಾಡುತ್ತೆ. ಇದಕ್ಕೆ ಕಾರಣ ಈ ಗ್ರಾಮದಿಂದ ಜಿಲ್ಲಾಡಳಿತ ಸಂಪರ್ಕಿಸುವ ಸೇತುವೆ ವರದಾನದಿಯಿಂದ ಜಲಾವೃತಗೊಳ್ಳುವುದು. ಸೇತುವೆ ಕಂ ಬ್ಯಾರೇಜ್ ಅನ್ನು ಎತ್ತರಿಸುವ ಕುರಿತಂತೆ 25 ಗ್ರಾಮಗಳ ಗ್ರಾಮಸ್ಥರು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಗ್ರಾಮಸ್ಥರ ಅಳಲು.
ಹಾವೇರಿ ಜಿಲ್ಲೆಯಲ್ಲಿ ಹರಿಯುವ ನದಿಗಳ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಪರಿಣಾಮ ವರದಾ, ಧರ್ಮಾ ತುಂಗಭದ್ರಾ ಮತ್ತು ಕುಮದ್ವತಿ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ. ಜಿಲ್ಲೆಯಲ್ಲಿ ವರದಾ ನದಿಯ ಹರಿವು ಹೆಚ್ಚಾಗುತ್ತಿದ್ದಂತೆ ಹಲವು ಸೇತುವೆಗಳು ಜಲಾವೃತಗೊಳ್ಳುತ್ತವೆ. ಅದರಲ್ಲಿ ಒಂದು ಹಾವೇರಿ ಜಿಲ್ಲಾಕೇಂದ್ರ ದೇವಗಿರಿ ಮತ್ತು ಸವಣೂರು ತಾಲೂಕಿನ 25 ಹಳ್ಳಿಗಳನ್ನು ಸಂಪರ್ಕಿಸುವ ಸೇತುವೆ. ಈ ಸೇತುವೆ ಕಂ ಬ್ಯಾರೇಜ್ ಅನ್ನು ಅವಲಂಭಿಸಿರುವ 25 ಗ್ರಾಮಗಳ ಜನ ಬೇರೆ ಮಾರ್ಗದ ಮೂಲಕ ಜಿಲ್ಲಾಡಳಿತ ಕಚೇರಿಗೆ ಬರುವಂತಾಗಿದೆ. ಹತ್ತು ಕಿ.ಮೀ ದೂರದ ಅಂತರವನ್ನ 30 ಕಿ.ಮೀ ಸುತ್ತುಬಳಸಿ ಹಾವೇರಿ ತಲುಪುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಂತೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.