ಹಾವೇರಿ: ಸ್ವಾತಂತ್ರ್ಯ ಹೋರಾಟಗಾರರ ಆಸ್ತಿ ವಶಪಡಿಸಿಕೊಂಡಿದ್ದಕ್ಕೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿಯ ವಾಹನ ಜಪ್ತಿ ಮಾಡಲಾಗಿದೆ. ವಾಹನ ಜಪ್ತಿ ಮಾಡಿ 20 ದಿನವಾದರೂ ಅಧಿಕಾರಿಗಳ ಸುಳಿವಿಲ್ಲ. ನ್ಯಾಯಾಲಯ ಶುಕ್ರವಾರ ಉಪವಿಭಾಗಾಧಿಕಾರಿಯ ಬಂಧನಕ್ಕೆ ವಾರೆಂಟ್ ಹೊರಡಿಸಿದೆ.
ಸ್ವಾತಂತ್ರ್ಯ ಹೋರಾಟಗಾರ ಸಿದ್ದಪ್ಪ ಹೊಸಮನಿ ಅವರ ಜಮೀನನ್ನು ಸರ್ಕಾರ 1967ರಲ್ಲಿ ರಸ್ತೆಗಾಗಿ ವಶಪಡಿಸಿಕೊಂಡಿತ್ತು. ಆದರೆ ಅದಕ್ಕೆ ನಿಗದಿಪಡಿಸಿದ್ದ ಪರಿಹಾರವನ್ನು ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಿದ್ದಪ್ಪ ಹೊಸಮನಿ ವಂಶಸ್ಥರು 2012ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಈ ಕುರಿತಂತೆ ಆದೇಶ ಹೊರಡಿಸಿತ್ತು. ಹೊಸಮನಿ ವಂಶಸ್ಥರಿಗೆ ಸುಮಾರು 1 ಕೋಟಿ 30 ಲಕ್ಷ ರೂಪಾಯಿ ಹಣ ನೀಡುವಂತೆ ನ್ಯಾಯಾಲಯಗಳು ಆದೇಶ ನೀಡಿದ್ದವು. ಹಾವೇರಿಯ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗೆ ಹಣ ತಲುಪಿಸುವಂತೆ ಆದೇಶ ನೀಡಲಾಗಿತ್ತು.
ಆದರೆ ಅಂದಿನಿಂದ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳನ್ನು ಹೊಸಮನಿ ಕುಟುಂಬದ ಸದಸ್ಯರು ಭೇಟಿಯಾದರೂ ಸಹ ಹಣ ನೀಡಿರಲಿಲ್ಲ. ಮೊದಲು 1 ಕೋಟಿ 30 ಲಕ್ಷವಿದ್ದ ಪರಿಹಾರ ಹಣ ಈಗ 1 ಕೋಟಿ 91 ಲಕ್ಷಕ್ಕೇರಿದೆ. ಆದರೆ ಈ ಹಣ ನೀಡದೆ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿ ಪ್ರತಿ ಸಲ ಬೇರೆ ಬೇರೆ ಕಾರಣಗಳನ್ನು ನೀಡುತ್ತಿದ್ದರು. ಇದರಿಂದ ನೊಂದ ಹೊಸಮನಿ ಸಂಬಂಧಿಕರು ಮತ್ತೆ ಜಿಲ್ಲಾ ನ್ಯಾಯಾಲಯದ ಮೆಟ್ಟೆಲೇರಿದ್ದರು.