ಹಾವೇರಿ :ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನಿವೃತ್ತ ಮ್ಯಾನೇಜರ್ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾದ ಘಟನೆ ನಗರದ ಡಿಸಿ ಆಫೀಸ್ ರಸ್ತೆಯಲ್ಲಿ ಇಂದು ನಡೆದಿದೆ. ಜಯರಾಮ್ ಕೊಲ್ಲಾಪೂರ ಅವರು ಚಾಕು ಇರಿತಕ್ಕೊಳಗಾದ ನಿವೃತ್ತ ಬ್ಯಾಂಕ್ ಮ್ಯಾನೇಜರ್. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಡಿಸಿ ಆಫೀಸ್ಗೆ ಜಯರಾಮ್ ತಮ್ಮ ಮಗನ ಜೊತೆಗೆ ಬಂದಿದ್ದರು. ಈ ವೇಳೆ ಎರಡು ಬೈಕ್ಗಳಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಚಾಕುವಿನಿಂದ ಮೂರು ಬಾರಿ ಇರಿದಿದ್ದಾರೆ. ಸ್ಥಳಕ್ಕೆ ಜನ ಧಾವಿಸಿ ಬಂದ ಕಾರಣ ಆರೋಪಿಗಳು ಪರಾರಿಯಾಗಿದ್ದಾರೆ. ಜಯರಾಮ್ ಅವರಿಗೆ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ ಹುಬ್ಬಳ್ಳಿಯ ಕಿಮ್ಸ್ ರವಾನಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾಕ್ಷ್ಯಗಳನ್ನು ಕಲೆಹಾಕಿದರು. ದುಷ್ಕರ್ಮಿಗಳ ಚಲನವಲನಗಳ ಮಾಹಿತಿ ಪಡೆದ ಅಧಿಕಾರಿಗಳು ಬಂಧನಕ್ಕೆ ಬಲೆ ಬೀಸಿದ್ದಾರೆ. ಹಾವೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಡಿಗೆದಾರರಿಂದ ಮಹಿಳೆಗೆ ಚಾಕು ಇರಿತ : ಮನೆ ಬಾಡಿಗೆ ಕೇಳಿದ ಮಹಿಳೆಗೆ ಮಾರಣಾಂತಿಕವಾಗಿ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುನೇಶ್ವರ ನಗರದ ನಿವಾಸಿ ಶ್ರೀದೇವಿ ಹಲ್ಲೆಗೊಳಗಾಗಿದ್ದು, ಈಕೆ ನೀಡಿದ ದೂರಿನ ಮೇರೆಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಜೀರ್, ಈತನ ಪುತ್ರ ಸದ್ದಾಂ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪತಿಯಿಂದಲೇ ಪತ್ನಿ ಕೊಲೆ ಯತ್ನ : ಪತ್ನಿ ಸರಿಯಿಲ್ಲ ಎಂದು ಹಾಡಹಗಲೇ ಪತಿಯೇ ಆಕೆಗೆ ಚಾಕು ಇರಿದಿರುವ ಘಟನೆ ಜೂನ್ 21ರ ಸಂಜೆ ಬಾಣಸವಾಡಿಯ ಸೆಂಟ್ ಜೋಸೆಫ್ ಚರ್ಚ್ ಬಳಿ ನಡೆದಿತ್ತು. ನಿಖಿತಾ (30) ತನ್ನ ಗಂಡ ದಿವಾಕರ್ನಿಂದ ಚಾಕು ಇರಿತಕ್ಕೊಳಗಾದ ಮಹಿಳೆ. ಚಾಕು ಇರಿದ ಗಂಡ ದಿವಾಕರ್ ಹಾಗೂ ಕೃತ್ಯಕ್ಕೆ ಸಾಥ್ ನೀಡಿದ್ದ ಆತನ ಚಿಕ್ಕಪ್ಪನ ಮಗ ಪ್ರತೀಭ್ನನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದರು.
ಪ್ರಿಯಕರನಿಗೆ ಪ್ರೇಯಸಿಯಿಂದ ಚಾಕು ಇರಿತ : ಸಂಬಂಧದಲ್ಲಿ ಅಂತರ ಕಾಯ್ದುಕೊಂಡ ಪ್ರಿಯಕರನಿಗೆ ಪ್ರೇಯಸಿಯೇ ಚಾಕುವಿನಿಂದ ಇರಿದಿರುವ ಘಟನೆ ಜುಲೈ ತಿಂಗಳಲ್ಲಿ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಅಸ್ಸಾಂ ಮೂಲದವರಾದ ಜೋಗೇಶ್ ಇರಿತಕ್ಕೊಳಗಾದ ಯುವಕ. ಆರೋಪಿ ಮಹಿಳೆ ಬರೂತಿಯನ್ನು ವಿವೇಕನಗರ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಮೊದಲೇ ಒಂದು ಮದುವೆಯಾಗಿ ಗಂಡನಿಂದ ಮಹಿಳೆ ದೂರಾಗಿದ್ದು, ಆ ಬಳಿಕ ಜೋಗೇಶ್‌ನೊಂದಿಗೆ ಒಟ್ಟಿಗೆ ವಾಸವಿದ್ದರು. ಇತ್ತೀಚಿಗೆ ಆಕೆಯಿಂದ ಅಂತರ ಕಾಯ್ದುಕೊಳ್ಳಲು ಯುವಕ ಮುಂದಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ :Bengaluru crime: ಮನೆ ಬಾಡಿಗೆ ಹಣ ಕೇಳಿದ್ದಕ್ಕೆ ಮಹಿಳೆಗೆ ಚಾಕುವಿನಿಂದ ಇರಿದ ಬಾಡಿಗೆದಾರ..