ಹಾವೇರಿ:ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಮತ್ತು ಆತನಿಗೆ ಸಹಕರಿಸಿದ ವ್ಯಕ್ತಿಗೆ ಇಪ್ಪತ್ತು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಹಾವೇರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಮಾಡಿದೆ. ಇಬ್ಬರಿಗೂ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ. 39 ಸಾವಿರ ದಂಡ ವಿಧಿಸಿ ಹಾವೇರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-1ರ ನ್ಯಾಯಾಧೀಶರಾದ ನಿಂಗೌಡ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಮುಂಡಗೋಡ ತಾಲೂಕಿನ ಗ್ರಾಮವೊಂದರ ಆರೋಪಿಯು ಅಪ್ರಾಪ್ತ ಬಾಲಕಿಗೆ ಫೋನ್ ಹಾಗೂ ಮೆಸೇಜ್ ಮಾಡುತ್ತಿದ್ದ. ಅಲ್ಲದೇ ದಿನಾಂಕ 08-11-2021 ರಂದು ಬಾಲಕಿಯ ಶಾಲೆಯ ಹತ್ತಿರ ಆರೋಪಿಯು ತನ್ನ ಸಹಚರನ ಜೊತೆ ಸೇರಿ ಬೈಕ್ ಮೇಲೆ ಬಂದು ಬಾಲಕಿಯನ್ನು ಅಪಹರಣ ಮಾಡಿದ್ದ. ನಂತರ ಶಿರಸಿಗೆ, ಅಲ್ಲಿಂದ ಧರ್ಮಸ್ಥಳಕ್ಕೆ ಹಾಗೂ ಉಜುರೆಗೆ ಬಾಲಕಿ ಕರೆದುಕೊಂಡು ಹೋಗಿದ್ದ. ಶಿರೋಡ ಲಾಡ್ಜ್ನಲ್ಲಿ ಎರಡು ದಿನಗಳ ಕಾಲ ಬಾಲಕಿಯ ಮೇಲೆ ಒತ್ತಾಯಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಹಿನ್ನೆಲೆ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಹಾನಗಲ್ ವೃತ್ತದ ತನಿಖಾಧಿಕಾರಿ ಡಿವೈಎಸ್‍ಪಿ ಎಂ.ಎಸ್.ಪಾಟೀಲ್ ಅವರು ಪ್ರಕರಣದ ತನಿಖೆ ನಡೆಸಿ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆರೋಪಿ ಹಾಗೂ ಆತನ ದುಷ್ಕೃತ್ಯಕ್ಕೆ ಸಹಕರಿಸಿದ ಆತನ ಸಹಚರನ ಮೇಲೆ ಹೊರಿಸಲಾದ ಆಪಾಧನೆಗಳಾದ ಕಲಂ 363, 376(2)(ಎನ್), ಭಾ.ದಂ.ಸಂ ಮತ್ತು ಕಲಂ: 4,6,17 ಪೋಕ್ಸೋ ಕಾಯ್ದೆ-2012ರ ಅಡಿ ಅಪಾದನೆಗಳನ್ನು ಅಭಿಯೋಜನೆಯು ರುಜುವಾತುಪಡಿಸಿರುತ್ತದೆ. ಈ ಹಿನ್ನೆಲೆ ನ್ಯಾಯಾಧೀಶರಾದ ನಿಂಗೌಡ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಸದರಿ ದಂಡದ ಹಣದಲ್ಲಿ ನೊಂದ ಬಾಲಕಿಗೆ ರೂ. 20 ಸಾವಿರ ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ಕರ್ನಾಟಕ ಸರ್ಕಾರವು ನೊಂದ ಬಾಲಕಿಗೆ ರೂ. 4,00,000/- ಗಳ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ. ಸರ್ಕಾರದ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಸರೋಜಾ ಕೂಡಲಗಿಮಠ ಪ್ರಕರಣದ ವಾದ ಮಂಡಿಸಿದರು.
ಇದನ್ನೂ ಓದಿ:ದಾವಣಗೆರೆ: ಬಾಲಕಿ ಮೇಲೆ ಅತ್ಯಾಚಾರ, ಅಪರಾಧಿಗೆ 20 ವರ್ಷ ಜೈಲುಶಿಕ್ಷೆ