ಹಾವೇರಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿ ಅರ್ಬಾಜ್ ದಸ್ತಗೀರ ಎಂಬಾತನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 2.80 ಲಕ್ಷ ರೂಪಾಯಿ ದಂಡ ವಿಧಿಸಿ ಹಾವೇರಿಯ ವಿಶೇಷ ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಶೀಘ್ರಗತಿ ನ್ಯಾಯಾಲಯ- 1 ರ ನ್ಯಾಯಾಧೀಶರಾದ ನಿಂಗೌಡ ಪಾಟೀಲ ಸೋಮವಾರ ಆದೇಶ ಪ್ರಕಟಿಸಿದರು.
ಬೆಂಗಳೂರು ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದ 20 ವರ್ಷದ ಅರ್ಬಾಜ್ ದಸ್ತಗೀರ ಅಪರಾಧಿ. ಅರ್ಬಾಜ್ ಬಾಲಕಿಗೆ ಮೊಬೈಲ್ ಮೂಲಕ ಸಂದೇಶ ಕಳುಹಿಸಿ ಮನೆಯಿಂದ ಹೊರ ಕರೆಯಿಸಿ ಅಪಹರಣ ಮಾಡಿದ್ದಾನೆ. ರಾಣೇಬೆನ್ನೂರ ಹೋಟೆಲ್ನ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದನು. ನಂತರ, ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದೆಲ್ಲ ಸುಳ್ಳು ಭರವಸೆ ನೀಡಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ.
ಇಷ್ಟೇ ಅಲ್ಲದೆ ಸೂಲಿಬೆಲೆ ಗ್ರಾಮಕ್ಕೆ ಕರೆದುಕೊಂಡು ಹೋಗಿ ಸ್ನೇಹಿತನ ಮನೆಯಲ್ಲಿಯೂ ಸಹ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತು ರಾಣೇಬೆನ್ನೂರ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ರಾಣೇಬೆನ್ನೂರು ಶಹರ ವೃತ್ತದ ತನಿಖಾಧಿಕಾರಿ ಸಿಪಿಐ ಎಂ.ಐ. ಗೌಡಪ್ಪ ಗೌಡ್ರ ಅವರು ತನಿಖೆ ನಡೆಸಿ, ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಅರ್ಬಾಜ್ ದಸ್ತಗೀರ ಮೇಲೆ ಹೊರಿಸಲಾದ ಆಪಾದನೆಗಳಾದ ಭಾರತೀಯ ದಂಡ ಸಂಹಿತೆ A ಕಲಂ 363, 366, 376 (2) (ಎನ್) ಮತ್ತು ಕಲಂ 4, 6, 12 ಪೋಕ್ಸೋ ಅಧಿನಿಯಮ- 2012 ರಡಿಯಲ್ಲಿರುವ ಅಪಾದನೆಗಳನ್ನು ಅಭಿಯೋಜನೆಯು ಸಾಕ್ಷ್ಯಾಧಾರಗಳ ಮೇಲೆ ರುಜುವಾತುಪಡಿಸಿದ್ದರು. ಇದೀಗ ಕೋರ್ಟ್ ಅಪರಾಧಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ನೀಡಿದೆ.
ದಂಡದ ಹಣದಲ್ಲಿ ನೊಂದ ಬಾಲಕಿಗೆ 2,50,000 ರೂಪಾಯಿ ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ಕರ್ನಾಟಕ ಸರ್ಕಾರ ನೊಂದ ಬಾಲಕಿಗೆ 4,00,000 ರೂ ಪರಿಹಾರ ನೀಡಬೇಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿಜಯ ಕುಮಾರ ಶಂಕರ ಗೌಡ ಪಾಟೀಲ ವಾದ ಮಂಡಿಸಿದ್ದಾರೆ.
ಲೈಂಗಿಕ ದೌರ್ಜನ್ಯ, ಅಪರಾಧಿಗೆ ಮರಣ ದಂಡನೆ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವಿಶೇಷ ಪೋಕ್ಸೋ ಕಾಯಿದೆ ನ್ಯಾಯಾಲಯ ಕೇವಲ 15 ದಿನಗಳಲ್ಲಿ ಲೈಂಗಿಕ ದೌರ್ಜನ್ಯ, ಕೊಲೆಗೆ ಸಂಬಂಧಿಸಿದಂತೆ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಅಪರಾಧಿಯು ಸದರ್ ಬಜಾರ್ ಪೊಲೀಸ್ ಠಾಣೆಯ ಔರಂಗಾಬಾದ್ ಪ್ರದೇಶದ 9 ವರ್ಷದ ಬಾಲಕನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ತನ್ನ ಗುರುತು ಬಹಿರಂಗಗೊಳ್ಳುವ ಭಯದಲ್ಲಿದ್ದ. ಇದರಿಂದಾಗಿ ಬಾಲಕನ ಕತ್ತು ಹಿಸುಕಿ ಕೊಂದಿದ್ದನು.
ಹಂತಕ ಸೈಫ್ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯ ಸೆಕ್ಷನ್ 363, 302, 201, 377 ಹಾಗೂ ಸೆಕ್ಷನ್-6ರ ಅಡಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದಾದ 5 ದಿನಗಳ ಬಳಿಕ ಆರೋಪಿಯ ಮೇಲಿದ್ದ ಎಲ್ಲ ಆರೋಪಗಳು ಸಾಬೀತಾಗಿವೆ. ಸಾಕ್ಷಿಗಳನ್ನು ಹಾಜರುಪಡಿಸಲಾಗಿತ್ತು. ಎಲ್ಲ ಸಾಕ್ಷ್ಯಗಳ ಚರ್ಚೆ ಪರಿಶೀಲನೆ ನಂತರ ವಿಶೇಷ ನ್ಯಾಯಾಧೀಶ ಪೋಕ್ಸೋ ಕಾಯ್ದೆಯ ನ್ಯಾಯಾಧೀಶ ರಾಮಕಿಶೋರ್ ಯಾದವ್ ಅಪರಾಧಿ ಸೈಫ್‌ಗೆ ವಿವಿಧ ಸೆಕ್ಷನ್‌ಗಳ ಅಡಿ ಕೋರ್ಟ್ ಶಿಕ್ಷೆ ವಿಧಿಸಿತ್ತು. ನಂತರ ನ್ಯಾಯಾಧೀಶರು ಅಪರಾಧಿಗೆ ಮರಣದಂಡನೆ ವಿಧಿಸಿದ್ದಾರೆ.
ಇದನ್ನೂ ಓದಿ:ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವು: ಪೊಲೀಸ್ ಸಿಬ್ಬಂದಿ ಸಸ್ಪೆಂಡ್, ಪ್ರಕರಣ ಸಿಐಡಿಗೆ