ಹಾವೇರಿ: ಹತ್ತಿ ಬೆಳೆ ಬಹು ಎತ್ತರಕ್ಕೆ ಬೆಳೆದು ನಿಂತರೂ ಫಸಲು ನೀಡದಿರುವುದು, ಹಾವೇರಿ ತಾಲೂಕಿನ ಭೂವೀರಾಪುರದ ರೈತರನ್ನು ಸಂಕಷ್ಟಕ್ಕೀಡುಮಾಡಿದೆ.
ಹಾವೇರಿ ಹತ್ತಿ ಬೆಳೆಗಾರರು ಸಂಕಷ್ಟದಲ್ಲಿ ಭೂವೀರಾಪುರದಲ್ಲಿ 30ಕ್ಕೂ ಅಧಿಕ ರೈತರು 50 ಎಕರೆ ಜಮೀನಿನಲ್ಲಿ ಹತ್ತಿ ಬೆಳೆದಿದ್ದಾರೆ. ಹತ್ತಿ ಗಿಡಗಳು ಆಳೆತ್ತರ ಬೆಳೆದು ನಿಂತಿವೆ. ಗಿಡಗಳಲ್ಲಿ ಕಾಯಿಗಳಾಗುತ್ತವೆ ಎಂದು ಕಾದು ಕುಳಿತ ರೈತರಿಗೆ ನಿರಾಸೆಯಾಗಿದೆ. ಗಿಡಗಳಲ್ಲಿ ಕಾಯಿಗಳು ಕಟ್ಟುತ್ತಿಲ್ಲ ಎಂದು ರೈತರು ಆತಂಕಕ್ಕೊಳಗಾಗಿದ್ದಾರೆ.
ರೈತರು ಒಂದು ಎಕರೆ ಜಮೀನಿಗೆ ಸುಮಾರು 50 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಜಮೀನಿನ ಲಾವಣಿ, ಬಿತ್ತನೆ ಬೀಜ, ಗೊಬ್ಬರ ಕ್ರಿಮಿನಾಶಕ, ಕಳೆ ತೆಗೆಯೋದು ಸೇರಿದಂತೆ ವಿವಿಧ ಕೆಲಸಗಳಿಗೆ ಸಹಸ್ರಾರು ರೂಪಾಯಿ ಖರ್ಚು ಮಾಡಿದ್ದಾರೆ. ಸಾಲ ಶೂಲ ಮಾಡಿ ಬೀಜ ತಂದು ಬೆಳೆದ ಹತ್ತಿ ಗಿಡ ಕಾಯಿ ಬಿಡದಿರುವದು ರೈತರ ಆಸೆಗೆ ತಣ್ಣೀರು ಎರಚಿದಂತಾಗಿದೆ.
ಹಾವೇರಿ ಹತ್ತಿ ಬೆಳೆಗಾರರು ಸಂಕಷ್ಟದಲ್ಲಿ..
ಕಳೆದ ವರ್ಷದ ಕ್ವಿಂಟಲ್‌ಗೆ ಐದು ಸಾವಿರವಿದ್ದ ಹತ್ತಿ ಪ್ರಸ್ತುತ ವರ್ಷ ಹತ್ತು ಸಾವಿರ ರೂಪಾಯಿಯಾಗಿದೆ. ಆದರೆ ಜಮೀನಿನಲ್ಲಿ ಮಾತ್ರ ಹತ್ತಿ ಬರದಿರುವುದು ಅನ್ನದಾತರನ್ನು ಕಂಗಾಲಾಗುವಂತೆ ಮಾಡಿದೆ. ಕಳೆದ ವರ್ಷ ಅಧಿಕ ಇಳುವರಿ ಬಂದಿದ್ದರಿಂದ ಈ ವರ್ಷವೂ ಸಹ ಅದೇ ಕಂಪನಿಯ ಹತ್ತಿ ಬೀಜಗಳನ್ನು ಕಷ್ಟಪಟ್ಟು ಹುಡುಕಾಡಿ ತಂದು ಹಾಕಿದ್ದಾರೆ. ಆದರೆ ಈ ರೀತಿ ಕಂಪನಿಯ ಹತ್ತಿ ಬೀಜ ಹಾಕಿದ ಸುಮಾರು 30 ರೈತರ ಜಮೀನಿನಲ್ಲಿ ಹತ್ತಿ ಗಿಡಗಳು ಫಲ ನೀಡಿಲ್ಲ. ಆಳೆತ್ತರ ಗಿಡ ಬೆಳೆದರೂ ಯಾವುದೇ ಕಾಯಿ ಕಟ್ಟಿಲ್ಲ.
ಇದನ್ನೂ ಓದಿ:ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಮಳೆ
ಈ ಕುರಿತಂತೆ ಬಿತ್ತನೆ ಬೀಜದ ಕಂಪನಿಗೆ ರೈತರು ಮನವಿ ನೀಡಿದ್ದಾರೆ. ಅಲ್ಲದೇ ಕೃಷಿ ಸಚಿವ ಬಿ.ಸಿ. ಪಾಟೀಲ್‌ಗೆ ಸಹ ಮನವಿ ಪತ್ರ ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಮನವಿ ಸ್ವೀಕರಿಸಿದ ಅಧಿಕಾರಿಗಳು ಜಮೀನಿಗೆ ಬರದಿರುವದು ರೈತರನ್ನು ಕೆರಳಿಸಿದೆ. ಅಧಿಕಾರಿಗಳು, ಹತ್ತಿ ಬೀಜದ ಕಂಪನಿ ಸಿಬ್ಬಂದಿ ತಮ್ಮ ಜಮೀನಿಗೆ ಆಗಮಿಸಿ ವಾಸ್ತವ ಸ್ಥಿತಿ ಅರಿಯಬೇಕು. ಸರ್ಕಾರವಾಗಲಿ, ಹತ್ತಿ ಬೀಜದ ಕಂಪನಿಯಾಗಲಿ ಬಂದು ತಾವು ಖರ್ಚು ಮಾಡಿದ ಹಣ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.