ಹಾವೇರಿ:ಬ್ಯಾಡಗಿ ಅಂದರೆ ಸಾಕು ತಕ್ಷಣ ನೆನಪಾಗುವುದು ಮೆಣಸಿನಕಾಯಿ. ಹಾವೇರಿ ಜಿಲ್ಲೆ ಬ್ಯಾಡಗಿ ವಿಶ್ವ ಪ್ರಸಿದ್ಧವಾಗಿರುವುದು ಮೆಣಸಿನಕಾಯಿ ಮಾರುಕಟ್ಟೆಯಿಂದ. ಮೆಣಸಿನಕಾಯಿ ಮಾರುಕಟ್ಟೆ ಇದೀಗ ಅತ್ಯಧಿಕ ದರ ನೀಡುವ ಮೂಲಕ ಸುದ್ದಿಯಲ್ಲಿದೆ.
ಬಲು ಜೋರಾಗಿದೆ ಬ್ಯಾಡಗಿ ಮೆಣಸಿನ ಮಾರಾಟ ಹೌದು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಬ್ಯಾಡಗಿ ಡಬ್ಬಿ ತಳಿಯ ಮೆಣಸಿನಕಾಯಿ ದಾಖಲೆ ದರದಲ್ಲಿ ಮಾರಾಟವಾಗಿದೆ. ಇಲ್ಲಿ ಖರೀದಿದಾರರು ಕ್ವಿಂಟಲ್‌ಗೆ 45,100 ರೂ ನೀಡುವ ಮೂಲಕ ದಾಖಲೆಯ ಬೆಲೆ ನೀಡಿ ಮೆಣಸಿನಕಾಯಿ ಖರೀದಿಸಿದ್ದಾರೆ. ನೈಸರ್ಗಿಕವಾಗಿ ಬೆಳೆದ ಉತ್ತಮ ರುಚಿ ಸ್ವಾದ ಮತ್ತು ಬಣ್ಣ ಹೊಂದಿರುವ ಬ್ಯಾಡಗಿ ಡಬ್ಬಿ ಮೆಣಸಿನಕಾಯಿಗೆ ಈ ದರ ನೀಡಲಾಗಿದೆ.
ಬ್ಯಾಡಗಿ ಮಾರುಕಟ್ಟೆಗೆ ದಕ್ಷಿಣ ಭಾರತದ ವಿವಿಧೆಡೆಯಿಂದ ಮೆಣಸಿನಕಾಯಿ ಮಾರಾಟಕ್ಕೆ ಬರುತ್ತೆ. ಇಲ್ಲಿಯ ಮಾರುಕಟ್ಟೆಯಲ್ಲಿ ಇ ಟೆಂಡರ್ ಮೂಲಕ ರೈತರಿಂದ ಮೆಣಸಿನಕಾಯಿ ಖರೀದಿಸಲಾಗುತ್ತಿದೆ. ಬೇರೆ ಮಾರುಕಟ್ಟೆಗಿಂತ ಇಲ್ಲಿ ಒಳ್ಳೆಯ ತಳಿಯ ಮೆಣಸಿನಕಾಯಿಗೆ ಹೆಚ್ಚು ಬೆಲೆ ಸಿಗುತ್ತದೆ. ಇದರಿಂದಾಗಿ ಕಳೆದ ಹಲವು ವರ್ಷಗಳಿಂದ ಬ್ಯಾಡಗಿ ಮಾರುಕಟ್ಟೆಗೆ ಮೆಣಸಿನಕಾಯಿ ಮಾರಾಟ ಮಾಡಲು ಬರುತ್ತಿರುವುದಾಗಿ ರೈತರು ತಿಳಿಸುತ್ತಾರೆ.
ಪ್ರತಿ ವರ್ಷ ನವಂಬರ್ ತಿಂಗಳಿಂದ ಮೇ ತಿಂಗಳವರೆಗೆ ಮಾರುಕಟ್ಟೆ ಕಾರ್ಯನಿರ್ವಹಿಸುತ್ತದೆ. ಈ ಅವಧಿಯಲ್ಲಿ ಇಲ್ಲಿ ಲಕ್ಷಾಂತರ ಕ್ವಿಂಟಾಲ್ ಮೆಣಸಿನಕಾಯಿ ಮಾರಾಟವಾಗುತ್ತದೆ. ತನ್ನದೇ ರುಚಿ ಬಣ್ಣ ಸ್ವಾದದಿಂದ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಅತ್ಯಧಿಕ ಬೇಡಿಕೆ ಹೊಂದಿದ್ದು ಅಧಿಕ ಬೆಲೆಗೆ ಮಾರಾಟವಾಗುತ್ತದೆ. ಜೊತೆಗೆ ಗುಂಟೂರು ಸೇರಿದಂತೆ ಇತರ ತಳಿಯ ಮೆಣಸಿನಕಾಯಿ ಮಾರಾಟವಾಗುತ್ತದೆ. ಮಾರುಕಟ್ಟೆಗೆ ಪ್ರಸಿದ್ಧವಾಗಿದ್ದ ಬ್ಯಾಡಗಿ ಇದೀಗ ಅಧಿಕ ಬೆಲೆ ನೀಡುವ ಮೂಲಕ ಗಮನ ಸೆಳೆಯುತ್ತಿದೆ. ರೈತರು ನೈಸರ್ಗಿಕವಾಗಿ ಬೆಳೆದ ಬ್ಯಾಡಗಿ ತಳಿಯ ಮೆಣಸಿನಕಾಯಿಗೆ ಉತ್ತಮ ಬೆಲೆ ಸಿಗುತ್ತೆ ಎಂಬುವದಕ್ಕೆ ಮಾರುಕಟ್ಟೆ ಸಾಕ್ಷಿಯಾಗಿದೆ.