ಕರ್ನಾಟಕ

karnataka

ETV Bharat / state

ಚರ್ಮಗಂಟು ರೋಗದಿಂದ ಸ್ಥಗಿತವಾಗಿದ್ದ ಹಾವೇರಿ ಜಾನುವಾರು ಮಾರುಕಟ್ಟೆ ಆರಂಭ

ಹಾವೇರಿ ಜಾನುವಾರು ಮಾರುಕಟ್ಟೆ ಪುಃ ಆರಂಭವಾಗಿದ್ದು ಸಾವಿರ, ಲಕ್ಷ ರೂ. ವರೆಗೆ ಜಾನುವಾರುಗಳ ಮಾರಾಟವಾಗಿದೆ.

haveri cattle market
ಹಾವೇರಿ ಜಾನುವಾರು ಮಾರುಕಟ್ಟೆ

By

Published : Feb 27, 2023, 9:22 AM IST

Updated : Feb 27, 2023, 9:36 AM IST

ಹಾವೇರಿ ಜಾನುವಾರು ಮಾರುಕಟ್ಟೆ

ಹಾವೇರಿ: ಉತ್ತರ ಕರ್ನಾಟಕದ ದೊಡ್ಡ ಜಾನುವಾರು ಮಾರುಕಟ್ಟೆಗಳಲ್ಲಿ ಒಂದಾದ ಹಾವೇರಿ ಜಾನುವಾರು ಮಾರುಕಟ್ಟೆ ಪುನಃ ಆರಂಭವಾಗಿದೆ. ಜಾನುವಾರುಗಳಿಗೆ ಕಾಣಿಸಿಕೊಂಡಿದ್ದ ಚರ್ಮಗಂಟು ರೋಗದಿಂದ ಜಿಲ್ಲಾಡಳಿತ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು. ಈಗ ರೋಗದ ತೀವ್ರತೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಆರಂಭವಾಗಿದೆ. ಮಾರುಕಟ್ಟೆಗೆ ದೂರ ದೂರದ ಊರುಗಳಿಂದ ರೈತರು ಜಾನುವಾರು ಖರೀದಿಗೆ ಮತ್ತು ಮಾರಾಟ ಮಾಡಲು ಆಗಮಿಸಲಾರಂಭಿಸಿದ್ದಾರೆ. ಖಿಲಾರಿ ತಳಿಯ ಹೋರಿಗಳ ಮಾರಾಟಕ್ಕೆ ಪ್ರಸಿದ್ಧವಾಗಿರುವ ಮಾರುಕಟ್ಟೆಯಲ್ಲಿ ಬಹುತೇಕ ಖಿಲಾರಿ ತಳಿ ಸೇರಿದಂತೆ ದೇಶಿಯ ತಳಿಯ ಎತ್ತುಗಳ ಮಾರಾಟವಾಗುತ್ತವೆ.

ಅದೇ ರೀತಿ ಆಕಳು ಎಮ್ಮೆಗಳ ಮಾರಾಟ ಸಹ ಮಾರುಕಟ್ಟೆಯಲ್ಲಿ ನಡೆಯುತ್ತೆ. ಜೊತೆಗೆ ಜರ್ಸಿ, ಹೆಚ್ಎಫ್, ಮಲ್ನಾಡ್ ಗಿಡ್ಡ ಸೇರಿದಂತೆ ವಿವಿಧ ತಳಿಯ ಆಕಳುಗಳ ಮಾರಾಟ ಸಹ ಇಲ್ಲಿ ನಡೆಯುತ್ತದೆ. ಮಳೆಗಾಲ ಹೊರತು ಪಡಿಸಿ ಉಳಿದ ದಿನಗಳಲ್ಲಿ ಇಲ್ಲಿ ದಲ್ಲಾಳಿ ಹತ್ತಿರ ಹೋರಿಗಳು ಮಾರಾಟಕ್ಕೆ ಸಿಗುತ್ತವೆ. ಮಾರುಕಟ್ಟೆ ನಡೆಯುವ ಗುರುವಾರ ದಿನದಂದು ಇಲ್ಲಿ ಸಾವಿರಾರು ರಾಸುಗಳು ಆಗಮಿಸುತ್ತವೆ. ಇನ್ನು ಪ್ರತ್ಯೇಕವಾದ ಕುರಿ ಮಾರುಕಟ್ಟೆ ಇಲ್ಲಿದ್ದು, ಬೆಂಗಳೂರು ಮಂಡ್ಯ ಮೈಸೂರುಗಳಿಂದ ವರ್ತಕರು ಆಗಮಿಸಿ ಕುರಿಗಳನ್ನು ಖರೀದಿ ಮಾಡುತ್ತಾರೆ.

ಚರ್ಮಗಂಟು ರೋಗದ ಪರಿಣಾಮ ಮಾರುಕಟ್ಟೆಗೆ ಆರಂಭದಲ್ಲಿ ಸ್ವಲ್ಪ ಕಡಿಮೆ ಸಂಖ್ಯೆಯಲ್ಲಿ ಎತ್ತುಗಳು ಆಗಮಿಸಿದ್ದವು. ಗುರುವಾರ ಮುಂಜಾನೆಯ ಮಾರುಕಟ್ಟೆಗೆ ಬುಧವಾರ ಸಂಜೆಯಿಂದಲೇ ಜಾನುವಾರುಗಳನ್ನು ತರಲಾಗುತ್ತದೆ. ಬುಧವಾರ ರಾತ್ರಿಯಿಂದ ಮುಂಜಾನೆ 8 ಗಂಟೆಯವರೆಗೆ ಕುರಿಗಳ ಮಾರಾಟ ನಡೆಯುತ್ತೆ. ಗುರುವಾರ ಮುಂಜಾನೆಯಿಂದ ಸಂಜೆಯವರೆಗೆ ಆಕಳು ಮತ್ತು ಎತ್ತುಗಳ ಖರೀದಿ ಭರಾಟೆ ಜೋರಾಗಿರುತ್ತೆ. ಮಧ್ಯಾಹ್ನದ ವೇಳೆಗೆ ಆಕಳುಗಳ ಮಾರಾಟ ಮುಕ್ತಾಯವಾದರೆ ಸಂಜೆಯವರೆಗೆ ಎತ್ತುಗಳ ಮಾರಾಟ ನಡೆಯುತ್ತೆ.

ಇಲ್ಲಿ ಎತ್ತುಗಳ ಖರೀದಿ ಮಾಡುವ ಮುನ್ನ ಹಲವು ಪರೀಕ್ಷೆ ಮಾಡಲಾಗುತ್ತದೆ. ಎತ್ತುಗಳ ಹಲ್ಲುಗಳು, ಅವುಗಳು ವ್ಯವಸಾಯದಲ್ಲಿ ಹೇಗೆ ಇವೆ ಎನ್ನುವುದಕ್ಕೆ ಎಡೆಕುಂಠಿ ಹೊಡೆದು ನೋಡಲಾಗುತ್ತೆ. ಇನ್ನು ಎತ್ತುಗಳ ಕಾಲುಗಳು ಅವುಗಳ ಮುಖದ ಮೇಲೆ, ಬಾಲದ ಮೇಲೆ ಇರುವ ಸುಳಿಗಳನ್ನು ನೋಡಲಾಗುತ್ತದೆ. ಕೆಲವೊಂದು ಸುಳಿಗಳು ಕೆಲ ರೈತರಿಗೆ ಶುಭದಾಯಕವಾದರೇ ಇನ್ನು ಕೆಲ ಸುಳಿಗಳು ರೈತರಿಗೆ ಹಾನಿ ಎಂಬುವ ನಂಬಿಕೆ ಇದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಪ್ರತ್ಯೇಕ ಕಣ ಇದ್ದು ಅಲ್ಲಿ ಹೋರಿಗಳನ್ನು ಪರೀಕ್ಷೆ ಮಾಡಲಾಗುತ್ತದೆ. ಹೀಗಾಗಿ ಮಾರುಕಟ್ಟೆಗೆ ಬರುವ ರೈತರು ತಮ್ಮ ಪರಿಚಿತ ದಲ್ಲಾಳಿಯನ್ನು ಸಂಪರ್ಕಿಸುತ್ತಾರೆ.

ಹಾವೇರಿ ಜಿಲ್ಲೆ ದನಬೆದರಿಸುವ ಸ್ಪರ್ಧೆಗೆ ಹೆಸರುವಾಸಿಯಾಗಿದ್ದು ಇಲ್ಲಿಯ ಹೋರಿಗಳನ್ನು ತಮಿಳುನಾಡು ಆಂಧ್ರಪ್ರದೇಶದ ರೈತರು ಖರೀದಿ ಮಾಡುತ್ತಾರೆ. ಕೆಲವರು ಜಲ್ಲಿಕಟ್ಟು ಸ್ಪರ್ಧೆಗಾಗಿ ಇಲ್ಲಿ ಎತ್ತುಗಳನ್ನು ಖರೀದಿ ಮಾಡುತ್ತಾರೆ. ಇಲ್ಲಿ ತಗೆದುಕೊಂಡು ಹೋದ ಹೋರಿಗಳಿಗೆ ತಮಿಳುನಾಡಲ್ಲಿ ಭರ್ಜರಿ ಡಿಮ್ಯಾಂಡ್ ಇದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 50 ಸಾವಿರ ಜೋಡಿ ಎತ್ತುಗಳಿಂದ ಹಿಡಿದು 5 ಲಕ್ಷದವರೆಗಿನ ಜೋಡಿ ಎತ್ತುಗಳ ಮಾರಾಟ ನಡೆಯಿತು.

ಅವುಗಳ ವಯಸ್ಸು ತಾಕತ್ತು ನೋಡಿ ದರಗಳನ್ನು ನಿಗದಿ ಮಾಡಲಾಗುತ್ತದೆ. ಜಾನುವಾರು ಮಾರುಕಟ್ಟೆಯಲ್ಲಿ ಇದೀಗ ಮೂರು ಪ್ರಾಂಗಣಗಳನ್ನು ಸಿದ್ದಪಡಿಸಲಾಗಿದೆ. ಒಂದು ದೊಡ್ಡದಾಗಿದ್ದರೆ ಎರಡು ಚಿಕ್ಕ ಪ್ರಾಂಗಣಗಳನ್ನು ರಚಿಸಲಾಗಿದೆ. ಇನ್ನು ಕುರಿಗಳ ಮಾರಾಟಕ್ಕೆ ವೈಜ್ಞಾನಿಕ ವಿಂಗಡಣೆ ಇಲ್ಲ. ಕುರಿಗಾರರು ಕುರಿಗಳನ್ನು ಹಿಂಡುಗಟ್ಟಲೆ ತಂದು ಹಿಂಡುಗಟ್ಟಲೆ ಮಾರಾಟ ಮಾಡುತ್ತಾರೆ.

ಕುರಿಗಳ ಹಿಂಡುಗಳನ್ನು ಪ್ರತ್ಯೇಕವಾಗಿ ನಿಲ್ಲಿಸಲು ಮಾರುಕಟ್ಟೆಯಲ್ಲಿ ವ್ಯವಸ್ತೆ ಇಲ್ಲ. ಇನ್ನು ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ ಮಾರುಕಟ್ಟೆಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲಾ ಎಂದು ರೈತರು ಆರೋಪಿಸುತ್ತಾರೆ. ರೈತರಿಗೆ ಮಾರುಕಟ್ಟೆಯಲ್ಲಿ ಉಳಿದುಕೊಳ್ಳಲು ಸೇರಿದಂತೆ ಮಾರುಕಟ್ಟೆಯಲ್ಲೊಂದು ಆಸ್ಪತ್ರೆ ನಿರ್ಮಿಸಬೇಕು ಎನ್ನುವ ಒತ್ತಾಯವನ್ನು ರೈತರು ವ್ಯಕ್ತಪಡಿಸಿದ್ದಾರೆ.

ಇದನ್ನುಓದಿ:ಮುಂದೆ ಕಮಲ, ಹಿಂದೆ ಹದ್ದು: ವಿಭಿನ್ನವಾಗಿ ನಿರ್ಮಾಣಗೊಂಡ ಶಿವಮೊಗ್ಗ ವಿಮಾನ ನಿಲ್ದಾಣದ ವಿಶೇಷತೆಗಳೇನು?

Last Updated : Feb 27, 2023, 9:36 AM IST

ABOUT THE AUTHOR

...view details