ಹಾವೇರಿ: ಮೇ28 ರಿಂದ 30ರವರೆಗೆ ನೇಪಾಳದ ಕಠ್ಮಂಡುವಿನಲ್ಲಿ ಸೌತ್ ಏಷಿಯನ್ ಫೆಡರೇಶನ್ ಅಸೋಸಿಯೇಷನ್ ಆಯೋಜಿಸಿದ್ದ ಮ್ಯಾರಥಾನ್ ಸ್ಪರ್ಧೆಯಲ್ಲಿ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದ ಏಳು ವರ್ಷದ ಬಾಲಕ ಮೊಹ್ಮದ್ ಜೈದ್ ಚಿನ್ನದ ಪದಕ ಪಡೆದು ಸಾಧನೆಗೈದಿದ್ದಾನೆ. ಸುಮಾರು 8ಕಿ.ಮೀ ಓಟದ ಸ್ಪರ್ಧೆಯಲ್ಲಿ ಮ್ಯಾರಥಾನ್ ಪೂರ್ಣಗೊಳಿಸಿದ್ದಾನೆ.
ಮೊಹ್ಮದ್ ಜೈದ್ ಈಗಾಗಲೇ ದೇಶದಲ್ಲಿ ನಡೆದಿದ್ದ ರಾಜ್ಯ, ಅಂತಾರಾಜ್ಯ ಮಟ್ಟದ 10 ಮ್ಯಾರಥಾನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾನೆ. ಮೂರುವರೆ ವರ್ಷದಿಂದಲೇ ಚಿಣ್ಣರ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದ ಜೈದ್ ಈವರೆಗೆ ಭಾಗವಹಿಸಿದ ಓಟಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನ ಬಾಚಿಕೊಂಡಿದ್ದಾನೆ.
ನೇಪಾಳದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಹಾವೇರಿ ಪೋರ ಮೊಹ್ಮದ್ ಜೈದ್ ತಂದೆ ಆಸೀಫ್ ಅಲಿ ಮಾಜಿ ಯೋಧರಾಗಿದ್ದು, ಮಗನ ಪ್ರತಿಭೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಆಸೀಫ್ ಅಲಿ ಕೂಡ ಕ್ರೀಡೆಯಲ್ಲಿ ಹೆಸರು ಮಾಡಬೇಕು ಎಂದು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ ಅಪಘಾತದಲ್ಲಿ ಗಾಯಗೊಂಡ ಆಸೀಫ್ ಕ್ರೀಡೆಯಲ್ಲಿ ಭಾಗವಹಿಸಲಾಗದ ಹಂತಕ್ಕೆ ತಲುಪಿದ್ದರು. ಈ ಹಿನ್ನೆಲೆ, ತಮ್ಮ ಕನಸನ್ನು ಮಗನ ಮೂಲಕ ಸಾಕಾರಗೊಳಿಸುತ್ತಿದ್ದಾರೆ. ಮಗನಿಗೆ ಮೂರುವರೆ ವರ್ಷದಿಂದಲೇ ತರಬೇತಿ ನೀಡುತ್ತಿದ್ದಾರೆ. ಪ್ರತಿದಿನ ಮುಂಜಾನೆ ಐದು ಗಂಟೆಗೆ ಎದ್ದು ಅಭ್ಯಾಸ ಮಾಡಿಸುತ್ತಿದ್ದಾರೆ.
ಇದನ್ನೂ ಓದಿ:ಭಾರತ-ದ.ಆಫ್ರಿಕಾ T-20 ಸರಣಿ: ಬೆಂಗಳೂರಲ್ಲಿ ಕೊನೆಯ ಪಂದ್ಯ... ಇಲ್ಲಿದೆ ಟಿಕೆಟ್ ದರ, ಬುಕ್ಕಿಂಗ್ ಮಾಹಿತಿ
42 ಕಿ.ಮೀ ಮ್ಯಾರಥಾನ್ಲ್ಲಿ ಹೆಸರು ಮಾಡಬೇಕು ಎನ್ನುವುದು ಆಸೀಫ್ ಅಲಿ ಕನಸು. ತಮ್ಮ ಮಗ ಜೈದ್ ಮುಂದಿನ ದಿನಗಳಲ್ಲಿ ಈ ಸಾಧನೆ ಮಾಡುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಮೊಹ್ಮದ್ ಜೈದ್ ಮ್ಯಾರಥಾನ್ ಜೊತೆ ಜೊತೆಗೆ ಜೋಡೋ, ಕರಾಟೆ ಸೇರಿದಂತೆ ವಿವಿಧ ಕಸರತ್ತುಗಳಲ್ಲಿ ತನ್ನನ್ನು ತೊಡಗಿಕೊಂಡಿದ್ದಾನೆ. ಮೊಹ್ಮದ್ ಜೈದ್ನ ಈ ಸಾಧನೆ ಇದೇ ರೀತಿ ಸಾಗಲಿ ಎಂದು ಹಿತೈಶಿಗಳು ಹಾರೈಸಿದ್ದಾರೆ.