ಹಾವೇರಿ:ಶರಣೆಂಬೆ ಅರಿವಿಗೆ, ಶರಣೆಂಬೆ ಗುರುವಿಗೆ, ಶರಣೆಂಬೆ ಸಾಹಿತ್ಯ, ಸಂಗೀತ ಸರಸ್ವತಿಗೆ, ಶರಣ ಶರಣೆಂಬೆ ನಿಮ್ಮೆಲ್ಲರಿಗೆ ಎಂದು ಈ ರೀತಿ ಹಾಡುತ್ತಾ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಭವ್ಯ ಸ್ವಾಗತ ಬಯಸಿದರು. ಹಾವೇರಿಯಲ್ಲಿ ನಡೆದ 86 ನೇ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ದೊಡ್ಡರಂಗೇಗೌಡ ಈ ರೀತಿ ಸ್ವಾಗತ ಕೋರಿ ನಂತರ ಮಾತನಾಡಿದ ಅವರು, ಮರಾಠಿಗರು ಇವತ್ತು ಬೆಳಗಾವಿ ನಮ್ಮದು ಅನ್ನುತ್ತಿದ್ದಾರೆ. ನಮ್ಮದು ಎಂದು ಹಠ ಮಾಡುತ್ತಿದ್ದಾರೆ. ಬಸ್ ಸುಡುವುದು ಮಾಡುತ್ತಿದ್ದಾರೆ. ಇದು ಬಗೆಹರಿಯುವಂತೆ ಕಾಣುತ್ತಿಲ್ಲ. ಬೆಳಗಾವಿಯ ಒಂದು ಅಂಗುಲ ಜಾಗವನ್ನೂ ಬಿಡುವುದಿಲ್ಲ. ಇದು ನಮ್ಮ ಶಪಥ. ಇದು ನಮ್ಮ ನಿಜವಾದ ಆಶಯ ಎಂದು ಹೇಳಿದರು.
ಮಹಾಜನ ವರದಿ ಓದಿರಿ:ನೀವೂ ಬೇಕಾದರೆ ಮನೆಗೆ ಹೋಗಿ ಮಹಾಜನ ವರದಿ ಓದಿರಿ. ಎಲ್ಲ ಪ್ರಕಾರಗಳಿಂದಲೂ ಬೆಳಗಾವಿ ನಮ್ಮದು. ಅದಕ್ಕೆ ಸಂಬಂಧಿಸಿದ ದಾಖಲೆಗಳು ಸಾಗರದಷ್ಟಿವೆ. ಗಡಿ ಬಿಕ್ಕಟ್ಟು ಏನಾದರೂ ಇದ್ದರೆ ಅದನ್ನು ಕಾನೂನಾತ್ಮಕವಾಗಿ, ಸಮಾಧಾನಚಿತ್ತದಿಂದ ಬಗೆಹರಿಸಿಕೊಳ್ಳಬೇಕೇ ವಿನಃ ಗಡಿ ಕ್ಯಾತೆ ಪದೇ ಪದೆ ಮಾಡುವುದು ಸಮಂಜಸವಲ್ಲ ಎಂದು 86ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡರು ಗುಡುಗಿದರು.
ಕನ್ನಡ ಶಾಲೆ ಸಂಸದರು ದತ್ತು ಪಡೆಯಲಿ:ಒಬ್ಬೊಬ್ಬ ಸಂಸದರು ಮೂರು ಮೂರು ಕನ್ನಡ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು. ಬನ್ನಿ ಗೆಳೆಯರೇ ಬನ್ನಿ ಗೆಳೆತಿಯರೇ ಕನ್ನಡಿಗರೆ ತೋರಿ ಅಕ್ಕರೆ ಎಂದು ತಾವೇ ಬರೆದ ಕವಿತೆಯನ್ನು ವಾಚಿಸಿ ದೊಡ್ಡರಂಗೇಗೌಡ ಕನ್ನಡದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಈಗ ಲಿವಿಂಗ್ ಟುಗೆದರ್ ಬಂದು, ತಂದೆ, ತಾಯಿ ಹೀಗೆ ಯಾರೂ ಬೇಡವಾದಂತಾಗಿದೆ. ಇಂಥವರಿಂದ ನಾವು ಸಮಾಜಕ್ಕೆ ಏನು ಹೇಳಲು ಹೊರಟಿದ್ದೇವೆ. ಈಡಿ ಭಾರತದ ಅಥವಾ ವಿಶ್ವದ ಭಾವೈಕ್ಯತೆಗೆ ಶಿಶುನಾಳ ಶರೀಫರು ಒಬ್ಬರು ಸಾಕು ಎಂದು ತಿಳಿಸಿದರು.
ಕುವೆಂಪು ವಿಶ್ವಮಾನವ ಕಲ್ಪನೆಯೊಳಗೆ ಬದುಕಿ:ಅದೇ ನೀರು, ಅದೆ ಗಾಳಿ, ಅದೆ ಸೂರ್ಯ, ಅದೆ ಚಂದ್ರ ಆದರೂ ನಾವ್ಯಾಕೆ ಕಿತ್ತಾಡುತ್ತೇವೆ. ಅದನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳಬೇಕಾಗುತ್ತದೆ. ಅದನ್ನು ಮಾನವೀಯ ಪ್ರಪಂಚ ಎಂದು ಕರೆಯುತ್ತಾರೆ. ಕುವೆಂಪು ಅವರ ವಿಶ್ವಮಾನವ ಕಲ್ಪನೆಯನ್ನು ಬದುಕಿಗೆ ಅಳವಡಿಸಿಕೊಂಡವನು ನಾನು ಎಂದ ಅವರು, ನೀವೆಲ್ಲರೂ ಯಾಕೆ ಆಂಗ್ಲ ವ್ಯಾಮೋಹಿಗಳು ಆಗುತ್ತಿದ್ದೀರಿ ಎಂದು ದೊಡ್ಡರಂಗೇಗೌಡರು ಇದೇ ವೇಳೆ ಕನ್ನಡಿಗರನ್ನು ಪ್ರಶ್ನಿಸಿದರು.