ಹಾವೇರಿ: ಜಿಲ್ಲೆಯಲ್ಲಿ ಜನವರಿ 6, 7 ಮತ್ತು 8 ರಂದು ಪ್ರಥಮ ಬಾರಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನಕ್ಕೆ ಬರುವಂತಹ ಅತಿಥಿಗಳು ಮತ್ತು ಸಾಹಿತಿಗಳಿಗೆ ಉಳಿದುಕೊಳ್ಳಲು ವಸತಿಗೆ ತೊಂದರೆಯಾಗದಂತೆ ಉಚಿತವಾಗಿ ಕಲ್ಯಾಣ ಮಂಟಪ ಮತ್ತು ಸಮುದಾಯ ಭವನಗಳಲ್ಲಿ ನೀಡಲು ಮಾಲೀಕರು ಮುಂದಾಗಿದ್ದಾರೆ.
ಕಸಾಪ ರಾಜ್ಯಾಧ್ಯಕ್ಷ ಡಾ ಮಹೇಶ್ ಜೋಶಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆಯವರಾಗಿದ್ದರಿಂದ ಸಮ್ಮೇಳನ ತೀವ್ರ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಚಿಕ್ಕ ಜಿಲ್ಲೆಯಾಗಿರುವ ಹಾವೇರಿಯಲ್ಲಿ ಸಮ್ಮೇಳನದ ಅತಿಥಿಗಳಿಗೆ ವಸತಿ ವ್ಯವಸ್ಥೆ ಒದಗಿಸುವುದು ದೊಡ್ಡಸವಾಲಿನ ಕೆಲಸವಾಗಿದೆ. ಆದರೆ ಜಿಲ್ಲಾಡಳಿತ ಈ ಆತಂಕವವನ್ನು ಹಾವೇರಿ ಜಿಲ್ಲಾ ಕಲ್ಯಾಣಮಂಟಪ ಮತ್ತು ಸಮುದಾಯ ಕೇಂದ್ರಗಳ ಮಾಲೀಕರು ದೂರ ಮಾಡಿದ್ದಾರೆ.
ಹಾವೇರಿ, ಶಿಗ್ಗಾಂವಿ, ಬ್ಯಾಡಗಿ ಮತ್ತು ರಾಣೆಬೆನ್ನೂರು ನಗರದಲ್ಲಿರುವ ಎಲ್ಲಾ ಕಲ್ಯಾಣ ಮಂಟಪ ಮತ್ತು ಸಮುದಾಯ ಭವನಗಳನ್ನು ಸಮ್ಮೇಳನಕ್ಕೆ ಬರುವ ಅತಿಥಿಗಳಿಗೆ ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಇದರಿಂದ ಜಿಲ್ಲಾಡಳಿತಕ್ಕೆ ದೊಡ್ಡ ಆತಂಕ ಕಡಿಮೆಯಾಗಿದೆ. ಈ ನಾಲ್ಕು ತಾಲೂಕು ಕೇಂದ್ರಗಳಲ್ಲಿ ಸುಮಾರು 30ಕ್ಕೂ ಅಧಿಕ ಕಲ್ಯಾಣ ಮಂಟಪ ಮತ್ತು ಸಮುದಾಯ ಭವನಗಳಿದ್ದು, ಬಹಳಷ್ಟು ಜನರು ಇಲ್ಲಿ ಉಳಿದುಕೊಳ್ಳಲಿದ್ದಾರೆ.