ಹಾವೇರಿ/ಬ್ಯಾಡಗಿ: ರಾಜ್ಯದಲ್ಲಿ ಅಮೂಲ್ ಮತ್ತು ನಂದಿನಿ ವಿವಾದ ನಡುವೆಯೇ ಹಾವೇರಿ ಜಿಲ್ಲೆ ಬ್ಯಾಡಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಗುಜರಾತ್‌ನ ಮೆಣಸಿನಕಾಯಿ ಪುಷ್ಪಾ ಪ್ರವೇಶ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಪ್ರವೇಶ ಮಾಡಿರುವ ಪುಷ್ಪಾ ಕ್ರಮೇಣ ಮಾರುಕಟ್ಟೆಯನ್ನ ತನ್ನ ಕಬಂಧ ಬಾಹುಗೆ ತಗೆದುಕೊಳ್ಳುತ್ತೆ. ಇದರಿಂದ ಹಾವೇರಿ ಜಿಲ್ಲೆಯ ಬ್ಯಾಡಗಿ ಡಬ್ಬಿ ಮತ್ತು ಕಡ್ಡಿ ತಳಿಗಳ ಕೇಳುವವರು ಇಲ್ಲದಂತಾಗುತ್ತದೆ ಎಂಬ ವದಂತಿಗಳು ಸಹ ಹರಡಿವೆ.
ರಾಜ್ಯದ ಮೆಣಸಿನಕಾಯಿ ಬೆಳೆಯುವ ರೈತರು ಮತ್ತು ವಹಿವಾಟು ನಡೆಸುವ ವರ್ತಕರು ಸಹ ಸಮಸ್ಯೆಗೆ ತುತ್ತಾಗುತ್ತಾರೆ ಎಂಬ ಮಾತುಗಳು ಸಹ ಕೇಳಿ ಬಂದಿವೆ. ಆದರೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ಪ್ರಮುಖ ವರ್ತಕರಲ್ಲಿ ಒಬ್ಬರಾಗಿರುವ ರಾಜು ಮೋಗೇರಿ ಈ ಎಲ್ಲಾ ವದಂತಿಗಳ ಅಲ್ಲಗೆಳೆದಿದ್ದಾರೆ. ಬ್ಯಾಡಗಿ ಮೆಣಸಿನಕಾಯಿ ಡಬ್ಬಿ ಮತ್ತು ಕಡ್ಡಿಗೆ ಸರಿಸಾಟಿ ಯಾವುದೇ ಇಲ್ಲ ಎಂದು ಮೋಗೇರಿ ತಿಳಿಸಿದ್ದಾರೆ. ಮತ್ತೊಂದು ಕಡೆ ಬ್ಯಾಡಗಿ ಮಾರುಕಟ್ಟೆ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ. ಇಲ್ಲಿ ದೇಶದ ವಿವಿಧಡೆಯಿಂದ ಮೆಣಸಿನಕಾಯಿ ಬರುತ್ತೆ. ಅದರಲ್ಲಿ ಗುಜರಾತ್‌ನ ಪುಷ್ಪಾ ಮತ್ತು ಆಂಧ್ರಪ್ರದೇಶದ ಗೊಂಡಾಲವಾಗಲಿ ಹಲವು ಬಗೆಯ ತಳಿಗಳ ಮೆಣಸಿನಕಾಯಿ ಮಾರುಕಟ್ಟೆಗೆ ಬರುತ್ತವೆ.
ಮಾರುಕಟ್ಟೆ ಮೇಲೆ ಪರಿಣಾಮ ಬೀರಲ್ಲ:ಮೆಣಸಿನಕಾಯಿ ಜವಾರಿ ಇರಲಿ ಹೈಬ್ರೀಡ್ ಇರಲಿ ಅವುಗಳಲ್ಲಿ ನೋಡುವುದು ಬಣ್ಣ ಮತ್ತು ಖಾರವನ್ನ ಮಾತ್ರ. ಅದರ ಮೇಲೆ ಇಲ್ಲಿಯ ಖಾರದ ಪುಡಿ ತಯಾರಕರು ಮೆಣಸಿನಕಾಯಿಗೆ ದರ ನಿಗದಿ ಮಾಡಿ ಖಾರದ ಪುಡಿ ತಯಾರಿಸುತ್ತಾರೆ. ಹೀಗಾಗಿ ಗೊಂಡಾಲವಾಗಲಿ, ಪುಷ್ಪಾವಾಗಲಿ ಬ್ಯಾಡಗಿ ಮಾರುಕಟ್ಟೆಯ ಮೇಲೆ ಹೇಳಿಕೊಳ್ಳುವಂತಹ ಪರಿಣಾಮ ಬೀರಲ್ಲ ಮತ್ತು ಬೀರುವದೂ ಇಲ್ಲ ಎಂದು ರಾಜು ಸ್ಪಷ್ಟ ಪಡಿಸಿದರು. ಲಕ್ಷಾಂತರ ಕ್ವಿಂಟಲ್ ಮೆಣಸಿನಕಾಯಿ ನಮ್ಮ ಮಾರುಕಟ್ಟೆಗೆ ಬರುತ್ತೆ ಅದರಲ್ಲಿ 05 ಸಾವಿರ ಕ್ವಿಂಟಲ್ ಮೆಣಸಿನಕಾಯಿ ಪುಷ್ಪಾ ಬಂದರೆ ಅದರಿಂದ ನಮ್ಮ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ರಾಜು ತಿಳಿಸಿದರು. ಗುಜರಾತ್‌ನ ಪುಷ್ಪಾ ನಮಗೆ ತೊಂದರೆ ನೀಡುವ ಬದಲು ಒಳ್ಳೆಯದನ್ನ ಮಾಡುತ್ತಿದೆ ಎನ್ನುತ್ತಾರೆ ರಾಜು.