ಹಾವೇರಿ:ಸರ್ಕಾರ ಕೊರೊನಾ ಎದುರಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಬಿಪಿಎಲ್ ಪಡಿತರರಿಗೆ ಅಕ್ಕಿಯನ್ನ ಎರಡು ತಿಂಗಳು ಉಚಿತವಾಗಿ ವಿತರಿಸುವುದು ಕೂಡಾ ಒಂದು. ಬಡವರು ಹಸಿವಿನಿಂದ ನರಳಬಾರದು ಎಂದು ಸರ್ಕಾರ ಅಕ್ಕಿಯನ್ನ ಉಚಿತವಾಗಿ ನೀಡಿದರೆ, ಅದು ಅಕ್ರಮ ದಾಸ್ತಾನು ಮಾಡುವವರ ಗೋದಾಮು ಸೇರುತ್ತಿದೆ. ಕಳ್ಳದಂಧೆಕೋರರು ಅಲ್ಲಿಂದ ಅಕ್ಕಿಯನ್ನ ಬೇರೆ ಕಡೆ ಸಾಗಿಸುತ್ತಿದ್ದಾರೆ. ಪಡಿತರ ಅಕ್ಕಿಯ ಅಕ್ರಮ ಸಾಗಾಟದ ದೊಡ್ಡ ಜಾಲವಿರುವ ಶಂಕೆಯನ್ನ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಸರ್ಕಾರಗಳು ಬಿಪಿಎಲ್ ಪಡಿತರರಿಗೆ ಐದು ಕೆಜಿ ಅಕ್ಕಿ, ಎರಡು ಕೆಜಿ ಗೋಧಿ ವಿತರಿಸುತ್ತಿವೆ. ಆದರೆ ಬಡವರ ಹಸಿವು ನೀಗಿಸಬೇಕಾಗಿದ್ದ ಈ ಅಕ್ಕಿ ಹಾವೇರಿಯಲ್ಲಿ ಕಳ್ಳದಂಧೆಕೋರರ ಗೋದಾಮು ಸೇರುತ್ತಿದೆ. ಈ ರೀತಿಯ ಅಕ್ರಮ ಸಂಗ್ರಹಣೆ ಮಾಡಿದ್ದ ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿ ವಶಪಡಿಸಿಕೊಂಡಿದ್ದಾರೆ.