ಹಾವೇರಿ: ಸಂಸದ ಜಿ.ಎಂ.ಸಿದ್ದೇಶ್ ಮತ್ತು ಸಂಬಂಧಿಕರು ನಡೆಸುತ್ತಿರುವ ಜಿ.ಎಂ.ಶುಗರ್ಸ್ ಎಂಡ್ ಎನರ್ಜಿ ಲಿ. ಕಂಪನಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಚಟ್ನಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ. ಈ ಅಕ್ರಮ ಗಣಿಗಾರಿಕೆಯನ್ನು ಪ್ರಶ್ನಿಸಿದ ರೈತರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ ಆರೋಪಿಸಿದ್ದಾರೆ.
ಸರ್ಕಾರದಿಂದ ಕೇವಲ 1.20 ಗುಂಟೆಯಲ್ಲಿ ಗಣಿಗಾರಿಕೆ ನಡೆಸಲು ಕಂಪನಿ ಅನುಮತಿ ಪಡೆದಿದೆ. ಆದರೆ ಜಿ.ಎಂ.ಶುಗರ್ಸ್ ಅನುಮತಿಯಿಲ್ಲದೇ 9,230 ಚದರ್ ಮೀಟರ್ ವಿಸ್ತೀರ್ಣದ ಜಾಗದಲ್ಲಿ 1.2 ಮೀಟರ್ ಆಳದ ವರೆಗೆ ಗಣಿಗಾರಿಕೆ ನಡೆಸಿದೆ. ಅಲ್ಲದೆ, 10,576 ಚದರ್ ಮೀಟರ್ ಸುತ್ತ 1 ಮೀಟರ್ ಆಳದಲ್ಲಿ ಕಂಪನಿ ಅಕ್ರಮವಾಗಿ ಗಣಿಗಾರಿಕೆ ನಡೆಸಿದೆ ಎಂದು ಹಿರೇಮಠ ಹೇಳಿದರು.
ಹಾವೇರಿಯಲ್ಲಿ ಮಾತನಾಡಿದ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ ಕಂಪನಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ಬಳಸುತ್ತಿದ್ದು, ಇದರಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾನಿಯಾಗಿದೆ. ಈ ಕುರಿತು ಪ್ರಶ್ನಿಸಲು ಹೋದ ರೈತರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿದೆ. ಸಕ್ಕರೆ ಕಾರ್ಖಾನೆ ಕಟ್ಟಡ ಎನರ್ಜಿ ಕಟ್ಟಡಕ್ಕೆ ಮಾತ್ರ ಗಣಿಗಾರಿಕೆ ಅನುಮತಿ ಪಡೆದ ಕಂಪನಿ, ಅಕ್ರಮವಾಗಿ ಬೇರೆ ಕಡೆ ಕಲ್ಲುಗಳನ್ನು ಮಾರಾಟ ಮಾಡುತ್ತಿದೆ. ಈ ಕೂಡಲೇ ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಿಸಬೇಕು ಹಾಗೂ ಅಕ್ರಮವಾಗಿ ತಯಾರಿಸಿದ ಕಲ್ಲಿನ ಪುಡಿ, ಕಲ್ಲಿನ ಕಡಿಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆಯಬೇಕು. ರೈತರ ಜಮೀನಿನಲ್ಲಿ ಕಟ್ಟಿದ ತಡೆಗೋಡೆಯನ್ನು ನಾಶಪಡಿಸಬೇಕು ಎಂದು ಎಸ್.ಆರ್.ಹಿರೇಮಠ ಆಗ್ರಹಿಸಿದರು.
ಈಗಾಗಲೇ ಚಿತ್ರದುರ್ಗ ಸೇರಿದಂತೆ ವಿವಿಧೆಡೆ ಜಿ.ಎಂ.ಶುಗರ್ಸ್ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ. ಅಕ್ರಮ ಗಣಿಗಾರಿಕೆಯಿಂದ ರೈತರ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.