ಕರ್ನಾಟಕ

karnataka

ETV Bharat / state

ಕೆರೆ ಮಧ್ಯೆ ನಿರ್ಮಾಣವಾಗುತ್ತಿದ್ದ ಗ್ಲಾಸ್​ಹೌಸ್ ಕಾಮಗಾರಿ​ ರದ್ದು.. ಸಿಎಂ ತವರಲ್ಲಿ 60 ಲಕ್ಷ ರೂ ನೀರುಪಾಲು

ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಕೆರೆ ಮಧ್ಯೆ ನಿರ್ಮಾಣ ಮಾಡಲಾಗುತ್ತಿದ್ದ ಗ್ಲಾಸ್​ಹೌಸ್​ಗೆ ಕೆರೆ ರಕ್ಷಣಾ ಪ್ರಾಧಿಕಾರ ಅನುಮತಿ ನೀಡದ ಹಿನ್ನೆಲೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಗ್ಲಾಸ್​ಹೌಸ್​ಗಾಗಿ ಬೇರೊಂದು ಕಡೆ ಸ್ಥಳ ನೀಡಲಾಗಿದ್ದು, ಅಲ್ಲಿಯೇ ನಿರ್ಮಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

Kn_hvr
ಹೆಗ್ಗೇರಿ ಕೆರೆ

By

Published : Nov 28, 2022, 8:49 PM IST

ಹಾವೇರಿ: ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಹೆಗ್ಗೇರಿ ಕೆರೆಯ ಮಧ್ಯಭಾಗದಲ್ಲಿ 5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ಗ್ಲಾಸ್​ಹೌಸ್ ಕಾಮಗಾರಿ ರದ್ದುಗೊಂಡಿದ್ದು, ಇದೀಗ ಬೇರೊಂದು ಕಡೆ ನಿರ್ಮಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ನಗರದ ಸೌಂದರ್ಯ ಹೆಚ್ಚಿಸಲು ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡಿದ್ದು, ನಗರದ ಹೊರವಲಯದಲ್ಲಿರುವ ಹೆಗ್ಗೇರಿ ಕೆರೆಯಲ್ಲಿ ಗ್ಲಾಸ್​ಹೌಸ್​ ನಿರ್ಮಾಣ ಮಾಡಲು ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಗ್ಲಾಸ್​ಹೌಸ್​ ಕಾಮಗಾರಿ ಗುತ್ತಿಗೆಗೆ ಟೆಂಡರ್​ ಕರೆಯಲಾಗಿತ್ತು. ಅದರಂತೆ ಗ್ಲಾಸ್​ಹೌಸ್​ ನಿರ್ಮಾಣದ ಕೆಲಸವೂ ಆರಂಭಿಸಲಾಗಿತ್ತು. ಸುಮಾರು 60 ಲಕ್ಷ ರೂ. ನಷ್ಟು ಕಾಮಗಾರಿಯನ್ನು ಮುಗಿಸಲಾಗಿತ್ತು.

ಆದರೆ, ಕೆರೆ ಸಂರಕ್ಷಣಾ ಪ್ರಾಧಿಕಾರ ಕೆರೆಯಲ್ಲಿ ಗ್ಲಾಸ್​ಹೌಸ್ ಕಾಮಗಾರಿಯನ್ನು ನಿಲ್ಲಿಸುವಂತೆ ಸೂಚಿಸಿದ ಹಿನ್ನೆಲೆ ಕಾಮಗಾರಿಯನ್ನು ಅರ್ಧದಲ್ಲೇ ಕೈಬಿಡಲಾಗಿತ್ತು. ಇದೀಗ ಜಿಲ್ಲಾಧಿಕಾರಿಗಳು ಗ್ಲಾಸ್​ಹೌಸ್​ ನಿರ್ಮಾಣಕ್ಕಾಗಿ ಹಾವೇರಿ ಸಮೀಪ ಇರುವ ನೆಲಗೋಲ್​ ಗುಡ್ಡದಲ್ಲಿ 2 ಎಕರೆ ಸರ್ಕಾರಿ ಜಮೀನನ್ನು ಮಂಜೂರು ಮಾಡಿದ್ದು, ಅಲ್ಲಿಯೇ ಗ್ಲಾಸ್​ಹೌಸ್​ ನಿರ್ಮಿಸುವಂತೆ ಸೂಚಿಸಿದ್ದಾರೆ.

ಕೆರೆ ಮಧ್ಯೆ ನಿರ್ಮಾಣವಾಗುತ್ತಿದ್ದ ಗ್ಲಾಸ್​ಹೌಸ್ ಕಾಮಗಾರಿ​ ರದ್ದು

ಈ ಕುರಿತು ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ಅವರು ಮಾತನಾಡಿ, ಗ್ಲಾಸ್​ಹೌಸ್​ ನಿರ್ಮಾಣ ಕುರಿತು ಜಿಲ್ಲಾಧಿಕಾರಿಗಳನ್ನು ಸಂಪರ್ಕ ಮಾಡಲಾಗಿತ್ತು. ಕೆರೆ ಸಂರಕ್ಷಣಾ ಪ್ರಾಧಿಕಾರದ ಒಪ್ಪಿಗೆ ಇಲ್ಲದ ಕಾರಣ ಬೇರೊಂದು ಸ್ಥಳದಲ್ಲಿ ಗ್ಲಾಸ್​ಹೌಸ್ ನಿರ್ಮಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಇದೀಗ ನೆಲೋಗಲ್ ಗುಡ್ಡದಲ್ಲಿ ಗ್ಲಾಸ್​ಹೌಸ್​ ನಿರ್ಮಾಣಕ್ಕೆ ಡಿಸಿ ಅನುಮತಿ ನೀಡಿದ್ದಾರೆ. ಅದೇ ಸ್ಥಳದಲ್ಲಿ ಗ್ಲಾಸ್​ಹೌಸ್​ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಸಂಜೀವಕುಮಾರ್ ಮಾಹಿತಿ ನೀಡಿದ್ದಾರೆ.

ಇನ್ನು, ಗ್ಲಾಸ್​ಹೌಸ ಬೇರೆ ಕಡೆ ವರ್ಗಾವಣೆ ಆಗಿರುವುದರಿಂದ ಹಾವೇರಿ ಪ್ರವಾಸೋದ್ಯಮಕ್ಕೆ ತೀವ್ರ ಹಿನ್ನೆಡೆಯಾಗಿದೆ. ಹೆಗ್ಗೇರಿ ಕೆರೆಯನ್ನು ಪ್ರಮುಖ ಆಕರ್ಷಣೆ ಮಾಡಿಕೊಂಡು ಅದರಲ್ಲಿ ಗ್ಲಾಸ್​ಹೌಸ್ ನಿರ್ಮಿಸಿ ಬೋಟಿಂಗ್ ವ್ಯವಸ್ಥೆ ಮಾಡುವ ನಗರಸಭೆಯ ಕನಸು ಭಗ್ನವಾಗಿದೆ. ಇತ್ತ ಹೆಗ್ಗೇರಿ ಕೆರೆಯಲ್ಲಿ ನಿರ್ಮಿಸಿರುವ ಸಿಮೆಂಟ್ ವೃತ್ತ ಎತ್ತರ ಇರದ ಕಾರಣ ಅಧಿಕ ಮಳೆ ಬಂದರೆ ಅದು ಮುಳುಗಡೆಯಾಗುತ್ತೆ. ಈಗಾಗಲೇ ಖರ್ಚು ಮಾಡಿರುವ 60 ಲಕ್ಷ ರೂಪಾಯಿ ವ್ಯರ್ಥವಾಗದಂತೆ ಸಿಮೆಂಟ್ ವರ್ತುಲವನ್ನು ಎತ್ತರಿಸಿ ಮಣ್ಣುಹಾಕಿ ಮೂರ್ತಿ ಸ್ಥಾಪಿಸುವ ಕೆಲಸ ಮಾಡಿ ಕೆರೆಯನ್ನು ಸುಂದರಗೊಳಿಸಿ ಎಂದು ಸಾರ್ವಜನಿಕರು ನಗರಸಭೆಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಸಂಚಾರ ನಿಯಮ ಉಲ್ಲಂಘನೆ: ದಂಡ ಬಾಕಿ ಉಳಿಸಿಕೊಂಡವರ ದಾಖಲೆಯೇ ಇಲ್ಲ: ಜಗದೀಶ್‌ ವಿ ಸದಂ ಆರೋಪ

ABOUT THE AUTHOR

...view details