ಹಾವೇರಿ:ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದೆ. ಗಣೇಶ ಚತುರ್ಥಿಗೆ ಕಲಾವಿದರು ವಿಘ್ನವಿನಾಶಕನ ಮೂರ್ತಿಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಗಣೇಶ ಚತುರ್ಥಿ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದ ಬಹುತೇಕ ಕುಟುಂಬಗಳು ಗಣೇಶ ಮೂರ್ತಿ ತಯಾರಿಕೆಯಲ್ಲಿ ನಿರತರಾಗುತ್ತಾರೆ. ಸುಮಾರು 40ಕ್ಕೂ ಅಧಿಕ ಕುಟುಂಬಗಳ ಸದಸ್ಯರು ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಗೋಟಗೊಡಿ ಸೇರಿದಂತೆ ವಿವಿಧ ಕೆರೆಗಳಲ್ಲಿ ಮಣ್ಣು ಸಂಗ್ರಹಿಸುವ ಈ ಕುಟುಂಬದವರು ಹದವಾಗಿ ಮಣ್ಣು ಹರಲು(ಕ್ಲೇ) ಮಾಡಿಕೊಂಡು ವಿಗ್ರಹ ತಯಾರಿಕೆಯಲ್ಲಿ ನಿರತರಾಗುತ್ತಾರೆ. ಕುನ್ನೂರು ಗಣೇಶ ವಿಗ್ರಹಕ್ಕೂ ಶಿಶುನಾಳ್ ಶರೀಫರಿಗೂ ಒಂದು ನಂಟಿದೆ. ಇಲ್ಲಿಯ ಚಿತ್ರಗಾರ ಕುಟುಂಬದ ಮೂರ್ತಿಗಳಿಗೆ ಶಿಶುನಾಳ್ ಶರೀಫರ ಮೆಚ್ಚುಗೆ ಸಿಕ್ಕಿತ್ತು. ಅಂದಿನಿಂದ ಚಿತ್ರಗಾರ ಕುಟುಂಬ ಗ್ರಾಮದಲ್ಲಿ ಗಣೇಶ ವಿಗ್ರಹ ತಯಾರಿಕೆಯಲ್ಲಿ ಮುಂಚೂಣೆಯಲ್ಲಿದೆ. ಚಿತ್ರಗಾರ ಕುಟುಂಬದಿಂದ ಗಣೇಶ ವಿಗ್ರಹ ತಯಾರಿಕೆ ಕಲಿತ ಉಳಿದ ಕುಟುಂಬಗಳು ಈಗ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ.
ಈ ಕುರಿತು ಕಲಾವಿದ ಚಂದ್ರಶೇಖರ್ ಮಾತನಾಡಿ, ಈ ಕಲೆಯನ್ನು ನಮ್ಮ ಅಜ್ಜ, ಅಪ್ಪನ ಕಾಲದಿಂದಲೂ ಮಾಡಿಕೊಂಡು ಬರಲಾಗುತ್ತಿದೆ. ನಾವು ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಕುನ್ನೂರು ಗಣಪತಿಗೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಗಣಪತಿ ಸೋಂಡಿಲು ಮತ್ತು ಮುಖಲಕ್ಷಣ ವಿಭಿನ್ನವಾಗಿರುತ್ತದೆ. ಹೀಗಾಗಿ ಜನರು ಕುನ್ನೂರು ಗ್ರಾಮದ ಗಣೇಶ್ ವಿಗ್ರಹ ಎಂದು ಸುಲಭವಾಗಿ ಕಂಡುಹಿಡಿಯುತ್ತಾರೆ ಎಂದರು.
ಇಲ್ಲಿ ತಯಾರಾಗುವ ವಿನಾಯಕನ ಮೂರ್ತಿಗಳು ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಮಾರಾಟವಾಗುತ್ತವೆ. ಗ್ರಾಮಗಳಲ್ಲಿ ಗ್ರಾಹಕರಿಂದ ಬೇಡಿಕೆ ತಿಳಿದುಕೊಂಡ ಕೆಲ ಕಲಾವಿದರು ಸಹ ಇಲ್ಲಿಗೆ ಬಂದು ನೂರು ಇನ್ನೂರು ಗಣಪತಿ ವಿಗ್ರಹ ಖರೀದಿಸುತ್ತಾರೆ. ಇನ್ನು ಗ್ರಾಹಕರು ಖುದ್ದಾಗಿ ಬಂದು ವಿಗ್ರಹ ಖರೀದಿಸಿ ನಂತರ ಪ್ರತಿಷ್ಠಾಪನೆ ಮಾಡುತ್ತಾರೆ. ಆರು ಇಂಚಿನಿಂದ ಹಿಡಿದು 5 ಅಡಿಯವರೆಗೆ ಗಣೇಶ ಮೂರ್ತಿಗಳು ಇಲ್ಲಿ ತಯಾರಾಗುತ್ತವೆ ಎಂದು ತಿಳಿಸಿದರು.