ಹಾವೇರಿ:ಅಕ್ಟೋಬರ್ 2 1869 ವಿಶ್ವ ಮಹಾನ್ ಚೇತನಗಳಲ್ಲಿ ಒಬ್ಬರಾಗಿರುವ ಮಹಾತ್ಮಾ ಗಾಂಧೀಜಿ ಅವರ ಜನುಮ ದಿನ. ಮೋಹನದಾಸ್ ಕರಮಚಂದ ಗಾಂಧೀಜಿ ಮಹಾತ್ಮಾ ಗಾಂಧೀಜಿಯಾಗಿದ್ದು ಈಗ ಇತಿಹಾಸ. ಪ್ರಸ್ತುತ ವರ್ಷ ಮಹಾತ್ಮಾ ಗಾಂಧೀಜಿ 154 ನೇ ಜನ್ಮದಿನ ಆಚರಿಸಲಾಗುತ್ತಿದೆ. ಅವರು ಜನಿಸಿದ ಪೋರಬಂದರ್‌ನಿಂದ ಹಿಡಿದು ಅವರ ಅಂತ್ಯಕ್ರಿಯೆ ನಡೆದ ರಾಜಘಾಟ್ ಸ್ಥಳಗಳು ಅವಿಸ್ಮರಣೀಯ ಸ್ಥಳಗಳಾಗಿವೆ.
ಮಹಾತ್ಮಾ ಗಾಂಧೀಜಿಗೂ ಮತ್ತು ಹಾವೇರಿಗೂ 1930 ರಕ್ಕಿಂತಲೂ ಹಿಂದಿನ ನಂಟಿದೆ. ಮಹಾತ್ಮಾ ಗಾಂಧೀಜಿ 12 ಮಾರ್ಚ್ 1930 ರಂದು ದಂಡಿ ಸತ್ಯಾಗ್ರಹ ಆರಂಭಿಸಿದಾಗ ಪಾಲ್ಗೊಂಡಿದ್ದ ಕೆಲವೇ ಕೆಲವು ಯುವ ಸ್ವಾತಂತ್ರ ಹೋರಾಟಗಾರರಲ್ಲಿ ಒಬ್ಬರು ಹಾವೇರಿಯ ಮೈಲಾರ ಮಹದೇವಪ್ಪ. ಮೈಲಾರ ಮಹದೇವಪ್ಪ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದವರು. ದಂಡಿ ಸತ್ಯಾಗ್ರಹದಿಂದಲೂ ಮಹಾತ್ಮಾ ಗಾಂಧೀಜಿಗೆ ಹಾವೇರಿಯ ಮೇಲೆ ವಿಶೇಷ ಆಸಕ್ತಿ. ಹಾವೇರಿಯ ಬಗ್ಗೆ ಸಾಕಷ್ಟು ಕುತೂಹಲ ಹೊಂದಿದ್ದ ಮಹಾತ್ಮಾ ಗಾಂಧೀಜಿ ಮಾರ್ಚ್ 1- 1934 ರಂದು ಹಾವೇರಿಗೆ ಆಗಮಿಸಿದ್ದರು.
ಗಾಂಧೀ ಭವನ: 1934 ಮಾರ್ಚ್ ಒಂದರಂದು ಹಾವೇರಿಗೆ ಬಂದಿದ್ದ ಗಾಂಧೀಜಿ ಹೈಸ್ಕೂಲ್ ಮೈದಾನದಿಂದ ಹೊಂಡದ ಮಠಕ್ಕೆ ಕಾಲ್ನಡಿಗೆಯಿಂದ ಹೋಗಿ ರಾಜೇಂದ್ರ ಗುರೂಜಿ ದರ್ಶನ ಮಾಡಿದ್ದರು. ನಂತರ ನಗರದ ರೈಲ್ವೆ ಸ್ಟೇಷನ್ ಹತ್ತಿರ ಧರ್ಮ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ ಮಾಡಿದ್ದರು. ಅಂದಿನ ರೈಲು ನಿಲ್ದಾಣದ ಪಕ್ಕದಲ್ಲಿರುವ ಧರ್ಮಶಾಲೆಗೆ ಭೇಟಿ ನೀಡಿದ್ದ ಮಹಾತ್ಮಾ ಗಾಂಧೀಜಿ ನೂತನ ಧರ್ಮಶಾಲಾ ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದರು. ಗಾಂಧೀಜಿ ಅಡಿಗಲ್ಲು ಹಾಕಿದ್ದ ಧರ್ಮಶಾಲಾ ಸ್ಥಳದಲ್ಲಿ ಇದೀಗ ಗಾಂಧೀ ಭವನ ನಿರ್ಮಾಣವಾಗಿದೆ.
ಗಾಂಧೀ ಭವನ ಸಂಪೂರ್ಣ ಗಾಂಧೀಮಯವಾಗಿಸುವುದರಲ್ಲಿ ಹಾವೇರಿ ಜಿಲ್ಲಾಡಳಿತ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಶ್ರಮಿಸಿದೆ. ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಗಾಂಧೀ ಭವನ ನಿರ್ಮಾಣಗೊಂಡಿದೆ. ಗಾಂಧೀಜಿ ತತ್ವಗಳನ್ನು ಯುವಕರಿಗೆ ತಿಳಿಸಿಕೊಡುವ ಸದುದ್ದೇಶದಿಂದ ಗಾಂಧೀಜಿ ಭವನ ನಿರ್ಮಾಣಗೊಂಡಿದೆ ಎನ್ನುತ್ತಾರೆ ಹಾವೇರಿ ವಾರ್ತಾಧಿಕಾರಿ ಡಾ.ರಂಗನಾಥ್.
ಗಾಂಧೀಜಿ ಭವನವನ್ನು ತುಂಬಾ ವಿಶೇಷವಾಗಿ ನಿರ್ಮಿಸಲಾಗಿದ್ದು, ಹಾವೇರಿ ಮಲೆನಾಡು ಮತ್ತು ಅರೆಮಲೇನಾಡು ಪ್ರದೇಶ ಎರಡು ವಾತಾವರಣವನ್ನು ತಡೆದುಕೊಳ್ಳುವ ಕಟ್ಟಡ ನಿರ್ಮಿಸಲಾಗಿದೆ. ಗಾಂಧೀ ಭವನಕ್ಕೆ ಕಾಲಿಡುತ್ತಿದ್ದಂತೆ ಅಲ್ಲಿಯ ಕಲಾಕೃತಿಗಳು ಮೂರ್ತಿಗಳು ಪುತ್ಥಳಿಗಳು ಗಮನ ಸೆಳೆಯುತ್ತವೆ. ಧ್ಯಾನಸ್ಥ ಸ್ಥಿತಿಯಲ್ಲಿ ಗಾಂಧೀಜಿಯ ಕಂಚಿನ ಪುತ್ತಳಿ ಸ್ಥಾಪಿತವಾಗಿದೆ. ಹಾವೇರಿ ಗಾಂಧೀಜಿ ಭವನ ತುಂಬಾ ವಿಶೇಷವಾಗಿದೆ ಎಂದು ರಂಗನಾಥ್ ವಿವರಿಸಿದ್ದಾರೆ.
ಮೈಲಾರ ಮಹದೇವಪ್ಪ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಏಕೈಕ ಕನ್ನಡಿಗರಾಗಿದ್ದರಿಂದ ದಂಡಿ ಸತ್ಯಾಗ್ರಹದ ಸ್ಮಾರಕವನ್ನು ಇಲ್ಲಿ ನಿರ್ಮಿಸಲಾಗಿದೆ. ಉಪ್ಪಿನ ಸತ್ಯಾಗ್ರಹದಲ್ಲಿ ಮೈಲಾರ ಮಹದೇವಪ್ಪ ಜೊತೆ ಮಹಾತ್ಮಾ ಗಾಂಧೀಜಿ ಹೆಜ್ಜೆ ಹಾಕಿದ ಚಿತ್ರದ ಮೇಲೆ ಒಂದು ಕಲಾಕೃತಿ ರಚಿಸಲಾಗಿದ್ದು ಅದ್ಬುತವಾಗಿ ರಚನೆಯಾಗಿದೆ.
ಗಾಂಧೀ ಭವನ ಎರಡು ಮಹಡಿ ಹೊಂದಿದ್ದು, ಗಾಂಧೀಜಿಯ ಪ್ರಮುಖ ಘಟ್ಟಗಳ ಭಾವಚಿತ್ರಗಳ ಪ್ರದರ್ಶನವಿದೆ. ಮೂರು ಹಂತದಲ್ಲಿ ಗಾಂಧೀಜಿ ಭಾವಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಗಾಂಧೀಜಿ ಬಾಲ್ಯದಿಂದ ಅಂತ್ಯದವರಗಿನ ಚಿತ್ರ ಪ್ರದರ್ಶನ. ಗಾಂಧೀಜಿ ರಾಜ್ಯದಲ್ಲಿನ ಪ್ರಮುಖ ಘಟ್ಟಗಳ ಚಿತ್ರಗಳು, ಹಾಗೂ ಮಹಾತ್ಮಾ ಗಾಂಧೀಜಿ ಹಾವೇರಿಗೆ ಜಿಲ್ಲೆಯಲ್ಲಿ ಹೆಜ್ಜೆ ಗುರುತುಗಳ ಚಿತ್ರಣ ಹೊಂದಿರುವ ಚಿತ್ರಪ್ರದರ್ಶನ ಇಲ್ಲಿ ಅಳವಡಿಸಲಾಗಿದೆ.
ಮಹಾತ್ಮಾ ಗಾಂಧೀಜಿ ಚರಕದಲ್ಲಿ ನೂಲು ನೇಯುವ ಕಲಾಕೃತಿ ಆಕರ್ಷಣೀಯವಾಗಿದೆ. ಈ ಚಿತ್ರಗಳ ಜೊತೆಗೆ ಅವುಗಳ ಕುರಿತ ಕಿರುಟಿಪ್ಪಣಿಗಳನ್ನು ಸಹ ಅಳವಡಿಸಲಾಗಿದೆ. ಗಾಂಧೀ ಭವನ ಒಳಪ್ರವೇಶಸಿದರೇ ಸಾಕು ಗಾಂಧೀಜಿ ಸಂಪೂರ್ಣ ಜೀವನ ಚರಿತ್ರೆಯನ್ನು ಕಟ್ಟಿಕೊಡುವ ಪ್ರಯತ್ನ ಇದಾಗಿದೆ ಎನ್ನುತ್ತಾರೆ ರಂಗನಾಥ್.
ಗಾಂಧೀಜಿ ಭವನದಲ್ಲಿ ಕಿರುಚಿತ್ರಗಳ ಪ್ರದರ್ಶನದ ಜೊತೆಗೆ ಗಾಂಧೀಜಿ ಕುರಿತು ಬರೆದ ಕೃತಿಗಳ ಗ್ರಂಥಾಲಯ ಸ್ಥಾಪಿಸಲಾಗಿದೆ. ವಿಶ್ವದ ಗಣ್ಯರು ಸೇರಿದಂತೆ ರಾಜ್ಯದ ಬರಹಗಾರರು ಗಾಂಧೀಜಿ ಕುರಿತಂತೆ ಬರೆದ ಗ್ರಂಥಗಳು ಓದುಗರಿಗೆ ಇಲ್ಲಿ ಲಭ್ಯವಾಗಲಿವೆ. ಎರಡನೆಯ ಮಹಡಿಯಲ್ಲಿ ಉಪನ್ಯಾಸ ಹಾಲ್ ಸ್ಥಾಪಿಸಲಾಗಿದ್ದು ಇಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಗಾಂಧೀವಾದಿಗಳನ್ನು ಗಾಂಧೀಜಿ ಬಗ್ಗೆ ವ್ಯಾಪಕ ಜ್ಞಾನ ಹೊಂದಿದ ಉಪನ್ಯಾಸಕರಿಂದ ಇಲ್ಲಿ ಉಪನ್ಯಾಸ ಏರ್ಪಡಿಸುವ ಚಿಂತನೆ ಇದೆ. ಸಾಂಸ್ಕೃತಿಕ ಚಟುವಟಿಕೆಗಳು ಜೊತೆಗೆ ಉಪನ್ಯಾಸ ನೀಡಲು ಹಾಲ್ ಸಹ ನಿರ್ಮಿಸಲಾಗಿದೆ. ಗಾಂಧೀ ಭವನಕ್ಕೆ ಬಂದರೆ ಸಾಕು ಮಹಾತ್ಮಾ ಗಾಂಧೀಜಿ ಜೀವನ ಚಿತ್ರಣವನ್ನು ಪುನರ್ ನೆನಪು ಮಾಡುವ ಎಲ್ಲ ಪ್ರಯತ್ನಗಳನ್ನು ಇಲಾಖೆ ಮಾಡಿದೆ.
ಭವನದ ಹಚ್ಚಹಸಿರಿನ ವಾತಾವರಣ ಎಂತಹ ವಿಕ್ಷಿಪ್ತ ಮನಸ್ಥಿತಿಯನ್ನು ಸಹ ಶಾಂತ ಮನಸ್ಥಿತಿಯಾಗಿ ಪರಿವರ್ತಿಸುವ ಶಕ್ತಿ ಹೊಂದಿದೆ. ಪ್ರಸ್ತುತ ಜಗತ್ತಿಗೆ ಗಾಂಧೀಜಿಯ ವಿಚಾರಧಾರೆಗಳು ಎಷ್ಟು ಪ್ರಮುಖವಾಗಿವೆ, ಶಾಂತಿ ಅಹಿಂಸೆ ಧರ್ಮಸಹಿಷ್ಣುತೆಗಳು ಇಲ್ಲಿಗೆ ಆಗಮಿಸುವವರಿಗೆ ಪ್ರೇರಣೆ ನೀಡುತ್ತವೆ. ಗಾಂಧೀಜಿ ಭವನ ಸಂಪೂರ್ಣ ಗಾಂಧೀಜಿಯ ತತ್ವಗಳು ವಿಚಾರಧಾರೆಗಳು ಸೇರಿದಂತೆ ಸಂಪೂರ್ಣ ಗಾಂಧೀ ಮಯವಾಗಿಸುವುದರಲ್ಲಿ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಶ್ರಮ ಎದ್ದು ಕಾಣುತ್ತದೆ.
ಇದನ್ನೂ ಓದಿ:ಜೆ.ಹೆಚ್.ಪಟೇಲರ ಚಿಂತನೆಗಳು ಕಾಲಾತೀತ: ಬಸವರಾಜ ಬೊಮ್ಮಾಯಿ