ಹಾವೇರಿ/ಕೋಲಾರ/ ಕೊಪ್ಪಳ: ಪುನೀತ್ ರಾಜ್ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರ ಬಿಡುಗಡೆ ಹಿನ್ನೆಲೆ ಹಾವೇರಿ ನಗರದ ಸರಸ್ವತಿ ಚಿತ್ರಮಂದಿರದ ಮುಂದೆ ಅಪ್ಪು ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.
ಗಂಧದ ಗುಡಿ ಚಿತ್ರದ ಬ್ಯಾನರ್ಗೆ, ಹೂವು ಹಾಕಿ, ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿದ ಅಭಿಮಾನಿಗಳು ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸಿದರು. ಇನ್ನು ಕೆಲವು ಅಭಿಮಾನಿಗಳು ಮೈ ಮೇಲೆ ಹಚ್ಚೆ ಹಾಕಿಸಿಕೊಂಡು, ಟೀ ಶರ್ಟ್ ಮೇಲೆ ಗಂಧದ ಗುಡಿ ಚಿತ್ರದ ಹೆಸರು, ಪುನೀತ್ ಅವರ ಭಾವಚಿತ್ರ ಹಾಕಿಸಿಕೊಂಡು ಸಂಭ್ರಮಿಸಿದರು.
ಇನ್ನು ಕೋಲಾರದ ಶಾರದ ಚಿತ್ರಮಂದಿರದ ಎದುರು ಸಹ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿತ್ತು. 'ಅಪ್ಪು ದೇವರುಗಳ ದೇವರು' ಎಂದು ಬಣ್ಣಿಸಿ, ಅಪ್ಪು ಫೋಟೋ ಹಿಡಿದುಕೊಂಡು ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ನೂರಾರು ವಿದ್ಯಾರ್ಥಿಗಳು ಸಹ ಕಾಲೇಜಿಗೆ ಬಂಕ್ ಮಾಡಿ ಸಿನಿಮಾ ನೋಡಿದರು. ನಾರಾಯಣಿ ಚಿತ್ರಮಂದಿರದಲ್ಲಿ ಅಭಿಮಾನಿಗಳು ಗಿಡ ನೆಟ್ಟು ಸಿಹಿ ಹಂಚಿ ಸಂಭ್ರಮಿಸಿದರು. ಅಪ್ಪು ಅವರ ಕನಸಿನಂತೆ 'ಎಲ್ಲರೂ ಗಿಡ ನೆಡಿ, ಪರಿಸರ ಉಳಿಸಿ' ಎಂಬ ಸಂದೇಶ ಸಾರಲಾಯಿತು.