ಹಾವೇರಿ :ಶನಿವಾರ ಪಂಜಾಬ್‌ನ ಬಟಿಂಡಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶೀಲವಂತ ಸೋಮಾಪುರದ ಯೋಧ ಶಿವರಾಜ್ (23) ಅಂತ್ಯಕ್ರಿಯೆ ಇಂದು ಸಂಜೆ ನಡೆಯಿತು. ಯೋಧ ಶಿವರಾಜ್ ಗಂಗಮ್ಮನವರ್ ಪಾರ್ಥೀವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಮೃತ ಶಿವರಾಜ್ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.
ಮೃತ ಶರೀರವನ್ನು ಶೀಲವಂತಸೋಮಾಪುರಕ್ಕೆ ಕರೆತರುವ ಮೊದಲು ಗಂಗ್ಯಾನೂರು ಮತ್ತು ದುಂಡಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಗ್ರಾಮದ ನಿವಾಸಕ್ಕೆ ಆಗಮಿಸಿದ ಪಾರ್ಥೀವ ಶರೀರಕ್ಕೆ ಕುಟುಂಬದ ಸದಸ್ಯರು ಅಂತಿಮ ನಮನ ಸಲ್ಲಿಸಿದರು.ನಂತರ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಮೃತ ಯೋಧನಿಗೆ ಗೌರವ ಸಲ್ಲಿಸಿದರು.