ಹಾವೇರಿ: ಸ್ಥಳೀಯ ಬಿಜೆಪಿ ಶಾಸಕರ ಕುಟುಂಬದಿಂದ ದಬ್ಬಾಳಿಕೆ ಆರೋಪ ಮಾಡಿರುವ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಪಾಂಡಪ್ಪ ಲಮಾಣಿ (70), ಗುರುಚಪ್ಪ ಲಮಾಣಿ (72), ಗಂಗವ್ವ ಕಬ್ಬೂರು (65) ಮತ್ತು ಹನುಮಂತಪ್ಪ ಬಡಿಗೇರ (41) ವಿಷ ಸೇವಿಸಿದವರು. ಜಮೀನಿನಲ್ಲೇ ವಿಷ ಸೇವಿಸಿ ಅಸ್ವಸ್ಥರಾದ ನಾಲ್ವರಿಗೆ ಬ್ಯಾಡಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ರವಾನಿಸಲಾಗಿದೆ.
ಕಾರಣ ಏನು? :ಶಿಡೇನೂರು ಗ್ರಾಮದ ಹಲವು ಕುಟುಂಬಗಳಿಗೆ ಶಾಸಕ ನೆಹರು ಓಲೇಕಾರ್ ಬ್ಯಾಡಗಿ ಶಾಸಕರಾಗಿದ್ದಾಗ ಸರ್ಕಾರಿ ಜಮೀನುಸಾಗುವಳಿ ಮಾಡಲು ಅವಕಾಶ ನೀಡಿದ್ದರಂತೆ. ಒಂದು ಎಕರೆ 15 ಗುಂಟೆ ಜಮೀನಿರುವ ಪಟ್ಟಾ ಸಹಾ ನೆಹರು ಓಲೇಕಾರ್ ನೀಡಿದ್ದರಂತೆ. ಗ್ರಾಮದ ಸುಮಾರು 29 ಜನರು ತಲಾ ಒಂದು ಎಕರೆ 15 ಗುಂಟೆ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡಿದ್ದರಂತೆ. ಆದರೆ, ಕೆಲದಿನಗಳ ಹಿಂದೆ ನೆಹರು ಓಲೇಕಾರ್ ಮತ್ತು ಅವರ ಕುಟುಂಬ ಸದಸ್ಯರು ತಲಾ 15 ಗುಂಟೆ ಬಿಟ್ಟುಕೊಡುವಂತೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆತ್ಮಹತ್ಯೆಗೆ ಯತ್ನಿಸಿದ ಸಂಬಂಧಿಕರು ಆರೋಪಿಸಿದ್ದಾರೆ.
ಜಮೀನು ಬಿಟ್ಟುಕೊಡುವಂತೆ ಬಿಜೆಪಿ ಶಾಸಕರ ಕುಟುಂಬದ ಒತ್ತಡ ಆರೋಪ; ನಾಲ್ವರಿಂದ ವಿಷ ಸೇವನೆ ಜಮೀನು ವಾಪಸ್ ನೀಡದವರಿಗೆ ಗ್ರಾಮಸ್ಥರು ಯಾವುದೇ ರೀತಿಯ ಸಹಕಾರ ನೀಡದಂತೆ ಒತ್ತಡ ಹಾಕಿದ್ದಾರಂತೆ. ಇದರಿಂದ ರೋಸಿ ಹೋಗಿದ್ದ 29 ಕುಟುಂಬಗಳಲ್ಲಿ ನಾಲ್ವರು ಜಮೀನಿನಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಆದರೆ, ಈ ಆರೋಪವನ್ನ ಹಾವೇರಿ ಶಾಸಕ ನೆಹರು ಓಲೇಕಾರ್ ತಳ್ಳಿಹಾಕಿದ್ದಾರೆ. ಶಿಡೇನೂರು ಗ್ರಾಮದಲ್ಲಿ ತಾವಾಗಲಿ ತಮ್ಮ ಕುಟುಂಬದ ಸದಸ್ಯೆ ಆಗಲಿ ಅಥವಾ ಬೇರೆಯವರು ಸಹ ಜಮೀನು ಬಿಟ್ಟುಕೊಡಿ ಎಂದು ಕೇಳಿಲ್ಲ. ಈ ಹಿಂದೆ 29 ಕುಟುಂಬಗಳ ಸದಸ್ಯರಿಗೆ ನಾನೇ ಒಂದು ಎಕರೆ 15 ಗುಂಟೆ ಭೂಮಿ ನೀಡಿದ್ದೇನೆ. ಅವರ ಸಂಖ್ಯೆ ಇದೀಗ ಹೆಚ್ಚಾಗಿದ್ದರಿಂದ ಜಮೀನು ಕಡಿಮೆಯಾಗಿದೆ. ಅದನ್ನ ಅವರು ಬೇರೆ ಕಡೆ ಕಬಳಿಸಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಅವರ ಹಿಂದೆ ಬ್ಯಾಡಗಿ ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ್ ಇದ್ದಾರೆ ಎಂದು ಓಲೇಕಾರ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಜೆಡಿಎಸ್ಗೆ ಹೆಚ್.ಆರ್.ಶ್ರೀನಾಥ್ ರಾಜೀನಾಮೆ, ಕಾಂಗ್ರೆಸ್ ಸೇರಲು ಸಿದ್ಧತೆ